ಕಂಟೇನರ್ ವಾಹನಕ್ಕೆ ಕಾರು ಢಿಕ್ಕಿ: ಐವರು ಸ್ಥಳದಲ್ಲೇ ಸಾವು
ಆಂಧ್ರಪ್ರದೇಶ: ಕಂಟೇನರ್ ವಾಹನಕ್ಕೆ ಹಿಂಬದಿಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಪಲಮನೇರು ಗಂಗಾವರಂ ಬಳಿ ನಡೆದಿದೆ.
ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ದ ಕಾರು, ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಂಟೇನರ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಅತ್ಯಂತ ಭೀಕರವಾಗಿದ್ದು, ಕಾರು ಸಂಪೂರ್ಣ ಜಜ್ಜಿಹೋಗಿದೆ. ಕಾರಿನಲ್ಲಿದ್ದ ಐವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರನ್ನು ಮೋಹನ್‌ದಾಸ್ , ನಾಗರಾಜ್ , ಕುಸುಮಾ , ಜಯಂತಿ, ಪೂಜಾ ಎಂದು ಗುರುತಿಸಲಾಗಿದೆ. ಮೃತರು ಬೆಂಗಳೂರಿನ ರಾಜಾಜಿ ನಗರದ ನಿವಾಸಿಗಳು ಎಂದು ಹೇಳಲಾಗಿದ್ದು, ಬೆಂಗಳೂರಿನಿಂದ ತಿರುಪತಿ ದೇಗುಲಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪಲಮನೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.




