ತನ್ನ ಮದುವೆಯ ಒಂದು ದಿನದ ಮುನ್ನ ನೇಣುಬಿಗಿದು ಯುವತಿ ಆತ್ಮಹತ್ಯೆ
ತಿರುವನಂತಪುರಂ: ತನ್ನ ಮದುವೆಯ ಒಂದು ದಿನದ ಮುನ್ನ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಶೈಮಾ (18) ಪ್ರಾಣ ಕಳೆದುಕೊಂಡ ಯುವತಿ.
ಶೈಮಾ ಕಳೆದ ಕೆಲ ವರ್ಷಗಳಿಂದ ನೆರೆಯ 19 ವರ್ಷದ ಯುವಕ ಸಜೀರ್ ಎನ್ನುವವನ ಜತೆ ಸಂಬಂಧದಲ್ಲಿದ್ದಳು. ಆದರೆ ಈ ವಿಚಾರ ಯುವತಿಯ ಮನೆಯವರಿಗೆ ಇಷ್ಟವಿರಲಿಲ್ಲ. ಇದರಿಂದ ಶೈಮಾಳ ಮನೆಯವರು ಬೇರೆ ಸಂಬಂಧವನ್ನು ಹುಡುಕಿದ್ದಾರೆ. ವಾರದ ಹಿಂದಷ್ಟೇ ಶೈಮಾಳಿಗೆ ವರ ಹುಡುಕಿ ಆತನೊಂದಿಗೆ ನಿಶ್ಚಿತಾರ್ಥ ಮಾಡಿದ್ದಾರೆ. ಇದು ಶೈಮಾಳಿಗೆ ಇಷ್ಟವಿರದಿದ್ರೂ, ಮನೆಯವರ ಒತ್ತಾಯಕ್ಕೆ ಮಣಿದು ಶೈಮಾ ನಿಶ್ಚಿತಾರ್ಥ ಮಾಡಿಕೊಂಡಿದ್ದಳು.
ಮದುವೆ ನಿಶ್ಚಯವಾಗಿತ್ತು. ಇನ್ನು ಒಂದೇ ದಿನ ಮದುವೆಗೆ ಬಾಕಿ ಉಳಿದಿತ್ತು. ಇಷ್ಟಪಟ್ಟ ಹುಡುಗನ ಸಂಬಂಧವನ್ನು ಒಪ್ಪದೆ, ಒತ್ತಾಯವಾಗಿ ಬೇರೆ ಹುಡುಗನ ಜತೆ ಮದುವೆ ನಿಶ್ಚಯಿಸಿದ ಮನೆಯವರ ನಿರ್ಧಾರಕ್ಕೆ ಮನನೊಂದಿದ್ದ ಶೈಮಾ, ಮದುವೆಯ ಒಂದು ದಿನದ ಮುನ್ನ ಚಿಕ್ಕಪ್ಪನ ಮನೆಯ ಟೆರೇಸ್‌ನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.
ಈ ವಿಚಾರ ತಿಳಿದ ಶೈಮಾಳ ಪ್ರಿಯಕರ ಸಜೀರ್ ಕೈ ಕೊಯ್ದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಕೂಡಲೇ ಮನೆಯವರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ವರದಿ ತಿಳಿಸಿದೆ.




