February 22, 2025

ಜ. 31ರಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ

0

ಬಂಟ್ವಾಳ: ಬ್ರಹ್ಮರಕೂಟ್ಲುವಿನ ಟೋಲ್ ಗೇಟ್ ತೆರವು ಗೊಳಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಜ. 31ರಂದು ಸಂಜೆ 3 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಎಸ್ ತಿಳಿಸಿದ್ದಾರೆ.

ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂಲಭೂತ ಸೌಕರ್ಯಗಳನ್ನು ಹೊಂದದ ಅವೈಜ್ಞಾನಿಕ ಮತ್ತು ಅಸಮರ್ಪಕವಾದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ  ಸರಕಾರದ ನಿಯಮ, ಮಾನದಂಡವನ್ನು ಉಲ್ಲಂಘಿಸಿ ಕಳೆದ 12 ವರ್ಷಗಳಿಂದ ಬ್ರಹ್ಮರಕೋಟ್ಲುವಿನಲ್ಲಿ ಟೋಲ್ ಗೇಟ್ ಕಾರ್ಯಾಚರಿಸುತ್ತಿದೆ. ಇಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲ, ಹೆದ್ದಾರಿಯಲ್ಲಿ ದಾರಿದೀಪವಿಲ್ಲ, ಪ್ರತೀ ವರ್ಷ ರಸ್ತೆಯನ್ನು ನಿರ್ವಹಣೆ ಮಾಡಬೇಕಾದ ಇದರ ಬಗ್ಗೆ ಗಮನಹರಿಸದೆ ಕಾಟಾಚಾರಕ್ಕೆ ತೇಪೆ ಹಾಕಲಾಗುತ್ತಿದೆ. ಟೋಲ್ ನ ಸಿಬ್ಬಂದಿಗಳು ವಾಹನ ಚಾಲಕರು ಹಾಗೂ ಪ್ರಯಾಣಿಕರೊಂದಿಗೆ ಗೂಂಡಾ ವರ್ತನೆ ತೋರುತ್ತಿದ್ದು, ಪೊಲೀಸರು ಕೂಡ ಇವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಈ ಎಲ್ಲಾ ಅಂಶಗಳನ್ನು ಖಂಡಿಸಿ ಬಿ.ಸಿ.ರೋಡಿನ ಕೈಕಂಬ ಜಂಕ್ಷನ್ ನಿಂದ ಪಾದಯಾತ್ರೆಯ ಮೂಲಕ ಹೊರಟು ಟೋಲ್ ಗೇಟ್ ಬಳಿ  ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನೆಗೆ ವಿವಿಧ ವಾಹನ ಚಾಲಕ, ಮಾಲಕರು, ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದ್ದು ಅವರು ಕೂಡಾ ಭಾಗವಹಿಸಲಿದ್ದಾರೆ ಎಂದರು.

 

 

ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ⁠ಮೂನಿಶ್ ಅಲಿ ಮಾತನಾಡಿ, ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡುವುದು ರಸ್ತೆ ನಿರ್ವಹಣೆಯ ಉದ್ದೇಶಕ್ಕಾಗಿ ಹೊರತು ರಸ್ತೆ ನಿರ್ಮಿಸಿದ್ದಕ್ಕಾಗಿ ಅಲ್ಲ ಎಂಬುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಅಕ್ಬರ್ ಪೊನ್ನೋಡಿ, ಶಾಕಿರ್ ಅಳಕೆಮಜಲು, ಅಶ್ರಫ್ ತಲಪಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!