ಬಂಡೀಪುರದಲ್ಲಿ ವಾಹನಗಳ ಮೇಲೆ ಕಾಡಾನೆ ದಾಳಿ: ಬೈಕ್ ಬಿಟ್ಟು ಓಡಿದ ಸವಾರರು

ಚಾಮರಾಜನಗರ: ಆಹಾರ ಅರಸಿ ರಸ್ತೆಗಿಳಿದ ಕಾಡಾನೆಯೊಂದು ವಾಹನಗಳ ಮೇಲೆ ದಾಳಿಗೆ ಮುಂದಾದ ಘಟನೆ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಬಂಡೀಪುರ ರಸ್ತೆಯಲ್ಲಿ ನಡೆದಿದೆ.
ಲಾರಿಯೊಂದರ ಮೇಲೆ ದಾಳಿ ಮಾಡಿದ ಆನೆಯು ತರಕಾರಿ, ಬೆಲ್ಲವನ್ನು ಕಿತ್ತು ತಿನ್ನಲು ಪ್ರಯತ್ನಿಸಿದೆ. ಈ ವೇಳೆ ಇಬ್ಬರು ಬೈಕ್ ಸವಾರರು ಆನೆ ಕಂಡೊಡನೆ ಬೈಕ್ ಬಿಟ್ಟು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತರಕಾರಿ ಸೇರಿ ಆಹಾರದ ಮೇಲಿನ ಆಸೆಗೆ ವಾಹನಗಳ ಮೇಲೆ ಆನೆ ದಾಳಿ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಈ ಕುರಿತು ಬಂಡೀಪುರ ಎಸಿಎಫ್ ನವೀನ್ ಕುಮಾರ್ ಮಾತನಾಡಿ, ತರಕಾರಿ ಆಸೆಗೆ ಕಾಡಾನೆಯೊಂದು ರಸ್ತೆಗಿಳಿಯುತ್ತಿದ್ದು, ಆನೆಯನ್ನ ಪುನಃ ಕಾಡಿಗೆ ಹಿಂದಿರುಗಿಸಲು ಪ್ರಯತ್ನ ಮಾಡುತ್ತಿದ್ದೇವೆ. ಪಟಾಕಿ ಸಿಡಿಸಿ ಓಡಿಸಲು ಮುಂದಾದರೆ, ಬೇರೆ ವಾಹನಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇಂದೂ ಕೂಡ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸುತ್ತಿದ್ದೇವೆ, ಆದರೆ ಆನೆ ಕಾಣಿಸಿಲ್ಲ ಎಂದು ಹೇಳಿದರು.