ಮಂಗಳೂರು: ಸಲೂನ್ ಮೇಲೆ ದಾಳಿ ಪ್ರಕರಣ: ಶ್ರೀರಾಮಸೇನೆಯ 14 ಮಂದಿಯ ಬಂಧನ

ಮಂಗಳೂರು: ಇಲ್ಲಿನ ಬಿಜೈ ಕೆಎಸ್ಸಾರ್ಟಿಸಿ ಬಳಿ ಕಾರ್ಯಾಚರಿಸುತ್ತಿದ್ದ “ಕಲರ್ಸ್ ಯುನಿಸೆಕ್ಸ್ ಸಲೂನ್” ಮೇಲೆ ದಾಳಿ ಮಾಡಿ ಅಲ್ಲಿನ ಮಹಿಳಾ ಸಿಬ್ಬಂದಿಗೆ ಬೈದು, ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವ ಆರೋಪದ ಮೇಲೆ ರಾಮ ಸೇನೆಯ 14ಮಂದಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಾಮ ಸೇನೆ ಮಂಗಳೂರು ಪ್ರಾಂತದ ಅಧ್ಯಕ್ಷ ಮಂಗಳೂರು ಗೋಕರ್ಣ ನಿಡ್ಡಲೆ ನಿವಾಸಿ ಪ್ರಸಾದ್ ಅತ್ತಾವರ, ಬಂಟ್ವಾಳ ತಾಲೂಕು ಪರಂಗಿಪೇಟೆ ನಿವಾಸಿ ಹರ್ಷರಾಜ್ ಯಾನೆ ಹರ್ಷಿತ್, ವಾಮಂಜೂರು ಮೂಡುಶೆಡ್ಡೆ ನಿವಾಸಿ ಮೋಹನ್ ದಾಸ್ ಯಾನೆ ರವಿ, ಕಾಸರಗೋಡು ಜಿಲ್ಲೆ ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರ ನಿವಾಸಿ ಸಚಿನ್, ವಾಮಂಜೂರು ಉಳಾಯಿಬೆಟ್ಟು ನಿವಾಸಿ ರವೀಶ್, ಬಂಟ್ವಾಳ ತಾಲೂಕಿನ ಬೆಂಜನಪದವು ಶಿವಾಜಿನಗರ ನಿವಾಸಿ ಸುಕೇತ್, ವಾಮಂಜೂರು ನಿವಾಸಿ ಅಂಕಿತ್, ವಾಮಂಜೂರು ಮೂಡುಶೆಡ್ಡೆ ಶಿವಾಜಿನಗರ ನಿವಾಸಿ ಕಾಳಿ ಮಟ್ಟು, ಬೊಂಡಂತಿಲ ತಾರಿಗುಡ್ಡೆ ಕಟ್ಟಿಂಗೆ ಸೈಟ್ ನಿವಾಸಿ ಅಭಿಲಾಷ್, ಮೂಡುಶೆಡ್ಡೆ ಶಿವಾಜಿನಗರ ನಿವಾಸಿ ದೀಪಕ್, ನೀರ್ಮಾರ್ಗ ಪೆದಮಲೆ ಸರಪಳ್ಳ ನಿವಾಸಿ ವಿಘ್ನೇಶ್, ಮಂಕಿ ಸ್ಟ್ಯಾಂಡ್ ಅಮರ್ ಆಳ್ವ ರಸ್ತೆ ನಿವಾಸಿ ಶರಣ್ ರಾಜ್, ಮೂಡುಶೆಡ್ಡೆ ಶಿವನಗರ ನಿವಾಸಿ ಪ್ರದೀಪ್ ಪೂಜಾರಿ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಸಲೂನ್ ಮಾಲಕ ಸುಧೀರ್ ಶೆಟ್ಟಿ ಅವರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಸೆಕ್ಷನ್ 329(2), 324(5), 74, BNS ನ 351(3), 115(2), 109, 352, ಮತ್ತು 190 ಅಡಿಯಲ್ಲಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.