ಸುಳ್ಯ: ಮಗನಿಗೆ ಗುರಿಯಿಟ್ಟ ಬಂದೂಕಿಗೆ ಪತ್ನಿ ಬಲಿ: ನೊಂದ ಪತಿ ವಿಷ ಕುಡಿದು ಆತ್ಮಹತ್ಯೆ!

ಪುತ್ತೂರು: ಮಗನಿಗೆ ಗುಂಡಿಕ್ಕಲು ಹೋಗಿ ಪತ್ನಿ ಬಲಿಯಾಗಿದ್ದು, ಇದರಿಂದ ನೊಂದುಕೊಂಡ ಪತಿಯೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ನೆಕ್ರಾಜೆಯಲ್ಲಿ ನಡೆದಿದೆ.
ನೆಕ್ರಾಜೆ ಗ್ರಾಮದ ರಾಮಚಂದ್ರ ಗೌಡ(53) ಆತ್ಮಹತ್ಯೆ ಮಾಡಿಕೊಂಡರೆ, ಅವರ ಪತ್ನಿ ವಿನೋದ(45) ಗುಂಡೇಟಿಗೆ ಬಲಿಯಾಗಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ರಾಮಚಂದ್ರ ಗೌಡ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದರು. ಈ ವೇಳೆ, ಮಾತಿಗೆ ಮಾತು ಬೆಳೆದಿದ್ದು ಮಗನ ಬಗ್ಗೆ ತಂದೆ ಸಿಟ್ಟಾಗಿ ಕೋವಿ ತೆಗೆದುಕೊಂಡು ಬಂದಿದ್ದರು. ಮಗನಿಗೆ ಗುರಿಯಿಟ್ಟು ಗುಂಡು ಹಾರಿಸಲು ಯತ್ನಿಸಿದಾಗ, ಪತ್ನಿ ವಿನೋದ ತಡೆಯಲು ಬಂದಿದ್ದರು.
ಪತಿಯನ್ನು ಹಿಂದಕ್ಕೆ ದೂಡುತ್ತಲೇ ಬೆಡ್ ರೂಮಿಗೆ ತಳ್ಳಲು ಯತ್ನಿಸಿದಾಗ, ಕೋವಿ ಟ್ರಿಗ್ಗರ್ ಒತ್ತಲ್ಪಟ್ಟು ಪತ್ನಿಯ ಎದೆಗೆ ಗುಂಡು ಹೊಕ್ಕಿತ್ತು. ಇದರಿಂದ ಪತ್ನಿ ವಿನೋದ ತೀವ್ರ ಗಾಯಗೊಂಡು ನೆಲಕ್ಕುರುಳಿ ಪ್ರಾಣ ಕಳಕೊಂಡಿದ್ದಾರೆ. ಪತ್ನಿ ನೆಲಕ್ಕೆ ಬಿದ್ದಿದ್ದನ್ನು ನೋಡಿ ಭಯಗೊಂಡು ಇನ್ನು ತಾನು ಕೂಡ ಬದುಕುವುದಿಲ್ಲ ಎಂದು ಹೇಳಿ ರಬ್ಬರ್ ಗಿಡಕ್ಕೆ ಹಾಕಲು ತಂದಿದ್ದ ಕೀಟ ನಾಶಕವನ್ನು ರಾಮಚಂದ್ರ ಗೌಡ ಕುಡಿದು ಪತ್ನಿ ಬಿದ್ದ ಜಾಗದಲ್ಲೇ ಬಿದ್ದುಕೊಂಡಿದ್ದಾರೆ.
ಮಗ ಪ್ರಶಾಂತ್ ಕಣ್ಣೆದುರಲ್ಲೇ ಘಟನೆ ನಡೆದಿದ್ದು ಪತಿ- ಪತ್ನಿ ದುರಂತ ಸಾವು ಕಂಡಿದ್ದಾರೆ. ಕುಡಿತದ ಚಟ, ಮಗನ ಮೇಲಿನ ಸಿಟ್ಟು, ಕೈಗೆ ಬಂದ ಬಂದೂಕು ಮನೆಯೊಳಗೆ ಸ್ಮಶಾನ ಸೃಷ್ಟಿಸಿದೆ. ಈ ಹಿಂದೆಯೂ ರಾಮಚಂದ್ರ ಗೌಡ ಬಂದೂಕು ಹಿಡಿದು ಪತ್ನಿ, ಮಗನನ್ನು ಮನೆಯಿಂದ ಓಡಿಸಿದ್ದರು. ಆನಂತರ, ಪತ್ನಿಯ ದೂರಿನಂತೆ ಕೋವಿಯನ್ನು ಡಿಪಾಸಿಟ್ ಮಾಡಲಾಗಿತ್ತು. ಇತ್ತೀಚೆಗೆ ಆನೆ, ಇತರ ಪ್ರಾಣಿಗಳ ಉಪಟಳದಿಂದಾಗಿ ಕೋವಿಯನ್ನು ಮರಳಿ ಮನೆಗೆ ತರಿಸಿಕೊಂಡಿದ್ದರು. ಅದೇ ಕೋವಿಯನ್ನು ಕುಡಿದ ಅಮಲಿನಲ್ಲಿ ಮತ್ತೆ ಹಿಡಿದುಕೊಂಡು ಬಂದಿದ್ದರು. ಲೋಡ್ ಮಾಡಿ ಇಟ್ಟಿದ್ದರಿಂದ ಟ್ರಿಗ್ಗರ್ ಒತ್ತುತ್ತಲೇ ಪತ್ನಿಯ ಪ್ರಾಣ ಹಾರಿ ಹೋಗಿದೆ.