ಕಂಬಳದಲ್ಲಿ ಅನಗತ್ಯವಾಗಿ ವಿಳಂಬ, ಕೋಣಗಳಿಗೆ ಹೊಡೆದರೆ ಮುಂದಿನ 2 ಕಂಬಳಗಳಿಗೆ ನಿಷೇಧ: ಕಂಬಳ ಸಮಿತಿ ತುರ್ತು ಸಭೆಯಲ್ಲಿ ನಿರ್ಣಯ

ಮೂಡುಬಿದಿರೆ: ಕಂಬಳಗಳಲ್ಲಿ ಗಂತಿನಲ್ಲಿ ಕೋಣಗಳನ್ನು ಬಿಡುವವರು ಅನಗತ್ಯವಾಗಿ ವಿಳಂಬ ಮಾಡುವ, ಮಂಜೊಟ್ಟಿ ಮತ್ತು ಗಂತಿನಲ್ಲಿ ಓಟಗಾರರು ಕೋಣಗಳಿಗೆ ಹೊಡೆಯುವ ಪ್ರಕರಣಗಳು ಸಾಬೀತಾದದಲ್ಲಿ ಅಂಥವರಿಗೆ ಮುಂದಿನ ಎರಡು ಕಂಬಳಗಳಿಗೆ ನಿಷೇಧ ವಿಧಿಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಎಚ್ಚರಿಕೆ ನೀಡಿದೆ.
ಒಂಟಿಕಟ್ಟೆಯಲ್ಲಿರುವ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣ ಸಮೀಪದ ಸಭಾಭವನದಲ್ಲಿ ಸಮಿತಿ ಅಧ್ಯಕ್ಷ ಬೆಳಪು ಡಾ| ದೇವಿಪ್ರಸಾದ್ ಅಧ್ಯಕ್ಷತೆಯಲ್ಲಿ ಗುರುವಾರ ಜರಗಿದ ಜಿಲ್ಲಾ ಕಂಬಳ ಸಮಿತಿಯ ತುರ್ತು ಸಭೆಯಲ್ಲಿ ಈ ಕುರಿತು ಸುದೀರ್ಘವಾಗಿ ಚರ್ಚಿಸಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.
24 ಗಂಟೆಗಳಲ್ಲಿ ಮುಗಿಯಬೇಕಾದ ಕಂಬಳಗಳು ವಿನಾಕಾರಣ ವಿಳಂಬಗೊಳ್ಳುತ್ತಿದ್ದು, ಇದು ಸರಕಾರದ ನಿಯಮಗಳಿಗೆ ವಿರುದ್ಧವಾಗಿದೆ. ಈ ರೀತಿಯ ಉಲ್ಲಂಘನೆ ಸೂಕ್ತವಾದುದಲ್ಲ ಎಂದರು.
ಈ ನಿಟ್ಟಿನಲ್ಲಿ ನಾವು ಸುಧಾರಣೆಗೊಳ್ಳದಿದ್ದರೆ ಕಂಬಳ ನಿಷೇಧಕ್ಕೆ ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.