ಕಣ್ಣೂರು: ಶಾಲಾ ಬಸ್ ಪಲ್ಟಿ: 5ನೇ ತರಗತಿ ವಿದ್ಯಾರ್ಥಿನಿ ಮೃತ್ಯು, ಹಲವು ವಿದ್ಯಾರ್ಥಿಗಳು ಗಂಭೀರ ಗಾಯ
ಕಣ್ಣೂರು: ಶಾಲಾ ಬಸ್ ಪಲ್ಟಿಯಾಗಿ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದು, ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಕಣ್ಣೂರಿನ ವಳಕ್ಕೈನಲ್ಲಿ ನಡೆದಿದೆ.
ಕಣ್ಣೂರಿನ ವಳಕೈ ಎಂಬಲ್ಲಿ ಬುಧವಾರ ಸಂಜೆ ಶಾಲಾ ಬಸ್ ಪಲ್ಟಿಯಾಗಿದ್ದು, 5ನೇ ತರಗತಿ ವಿದ್ಯಾರ್ಥಿನಿ ನೇದ್ಯ ಎಸ್ ರಾಜೇಶ್ ಪ್ರಾಣ ಕಳೆದುಕೊಂಡಿದ್ದು, ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಕುರುಮತ್ತೂರು ಚಿನ್ಮಯ ಶಾಲೆಯ ಬಸ್ ಪಲ್ಟಿಯಾಗಿದೆ. ಬಸ್ ಪಲ್ಟಿಯಾದಾಗ ಬಸ್ಸಿನ ಮುಂದಿನ ಸೀಟಿನಲ್ಲಿದ್ದ ನೇದ್ಯ ಹೊರಕ್ಕೆ ಎಸೆಯಲ್ಪಟ್ಟು ವಾಹನದಡಿಯಲ್ಲಿ ಸಾವನ್ನಪ್ಪಿದ್ದಾಳೆ.
ಅಪಘಾತದ ವೇಳೆ ಚಾಲಕನ ಫೋನ್‌ನಿಂದ ವಾಟ್ಸಾಪ್ ಸ್ಟೇಟಸ್ ಅಪ್‌ಲೋಡ್ ಆಗಿರುವುದು ಪತ್ತೆಯಾಗಿದೆ. ಆದ್ದರಿಂದ ಚಾಲಕ ವಾಹನ ಚಲಾಯಿಸುವಾಗ ಫೋನ್ ಬಳಸಿದ್ದು ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಬುಧವಾರ ಸಂಜೆ 4.03ಕ್ಕೆ ಅಪಘಾತ ಸಂಭವಿಸಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಸ್ಪಷ್ಟವಾಗಿದೆ. ಇದೇ ವೇಳೆ ಚಾಲಕನ ವಾಟ್ಸ್ ಆಪ್ ನಿಂದ ಸ್ಟೇಟಸ್ ಅಪ್ ಲೋಡ್ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದಕ್ಕೆ ಸಾಕ್ಷಿ ಹೊರಬಿದ್ದಿದೆ. ಅಪಘಾತದ ಸಮಯ ಮತ್ತು ಸ್ಟೇಟಸ್ ಅಪ್ಲೋಡ್ ಮಾಡಿದ ಸಮಯ ಒಂದೇ ಆಗಿದ್ದರೆ, ಅಪಘಾತದ ವೇಳೆ ಚಾಲಕ ನಿಜಾಮ್ ವಾಟ್ಸಾಪ್ ಬಳಸುತ್ತಿರಬಹುದು ಎಂಬ ಸೂಚನೆ ಬಲವಾಗುತ್ತಿದೆ.




