December 15, 2025

ಬೀದರ್: ಶಾಲೆಯಲ್ಲಿ ಮಕ್ಕಳನ್ನು ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ:
ರಾಜ್ಯ ಸರ್ಕಾರ

0
Karnataka-HC.jpg

ಬೆಂಗಳೂರು: ಬೀದರ್‌ನ ಶಾಹೀನ್‌ ಶಾಲೆಯಲ್ಲಿ ಸಮವಸ್ತ್ರ ಧರಿಸಿ ಮತ್ತು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದ ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಬೀದರ್‌ನ ಶಾಹೀನ್‌ ಶಾಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಗೆ(ಸಿಎಎ) ಸಂಬಂಧಿಸಿದಂತೆ ಕಳೆದ ವರ್ಷ ಮಕ್ಕಳು ಪ್ರಸ್ತುತಪಡಿಸಿದ್ದ ನಾಟಕವನ್ನು ಆಧಾರವಾಗಿಸಿಕೊಂಡು ಶಾಲೆಯ ವಿರುದ್ಧ ದಾಖಲಿಸಲಾಗಿದ್ದ ರಾಷ್ಟ್ರದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಕ್ಕಳನ್ನು ವಿಚಾರಣೆ ನಡೆಸಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್‌ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪೊಲೀಸ್ ಸಮವಸ್ತ್ರ ಧರಿಸಿ ಮತ್ತು ಶಸ್ತ್ರಾಸ್ತ್ರಗಳನ್ನು ಹಿಡಿದು ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ದಿನದಂತ್ಯಕ್ಕೆ ಮೆಮೊ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರದ ಪರ ವಕೀಲರು ಹೈಕೋರ್ಟ್ ಗೆ ತಿಳಿಸಿದರು.

‘ಈ ಸಂಬಂಧ ಮೂರ್ನಾಲ್ಕು ದಿನಗಳಲ್ಲಿ ಅನುಪಾಲನಾ ವರದಿ ಸಲ್ಲಿಸಲಾಗುವುದು. ಸುತ್ತೋಲೆಯಲ್ಲಿ ಎರಡನೇ ನಿರ್ದೇಶನವಾದ ಬಾಲ ನ್ಯಾಯ(ಮಕ್ಕಳ ಆರೈಕೆ ಮತ್ತು ರಕ್ಷಣೆ) ಮಾದರಿ ನಿಯಮಗಳು 2016ಅನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಪೊಲೀಸ್‌ ಠಾಣೆಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆ ಕಳುಹಿಸಿದ್ದಾರೆ. ಈ ಘಟನೆ ಮುಂದೆ ಮರುಕಳಿಸುವುದಿಲ್ಲ’ ಎಂದು ಸರ್ಕಾರಿ ವಕೀಲರು ಪೀಠಕ್ಕೆ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!