PhonePay ಮೂಲಕ 17 ಸಾವಿರ ರೂ.ಲಂಚದ ಹಣ ಪಡೆಯುತ್ತಿದ್ದ PDO ಲೋಕಾಯುಕ್ತ ಬಲೆಗೆ
ಕಲಬುರಗಿ: ಪಂಪ್ ಆಪರೇಟರ್ ಒಬ್ಬರ ಬಾಕಿ ವೇತನ ಮಂಜೂರು ಮಾಡಲು ಹಾಗೂ ಮರು ನೇಮಕ ಮಾಡಿಕೊಳ್ಳಲು ಫೋನ್ ಪೇ ಮೂಲಕ 17 ಸಾವಿರ ರೂ.ಲಂಚದ ಹಣ ಪಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಲಬುರಗಿ ತಾಲ್ಲೂಕಿನ ಕವಲಗಾ (ಬಿ) ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರೀತಿರಾಜ್ ಲೋಕಾಯುಕ್ತ ಬಲೆಗೆ ಬಿದ್ದವರು.
ಪಂಪ್ ಆಪರೇಟರ್ ಗುರುಸಿದ್ದಯ್ಯ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಅರುಣ್ ಕುಮಾರ್, ಸಿಬ್ಬಂದಿಗಳಾದ ಮಸೂದ್, ಮಲ್ಲಿನಾಥ, ಬಸವರಾಜ, ಸಂತೋಷಿ, ಮಧುಮತಿ ಮತ್ತು ಪ್ರಮೋದ್ ಅವರು ದಾಳಿ ನಡೆಸಿದ್ದಾರೆ.
ಗುರುಸಿದ್ದಯ್ಯ ಅವರ 6 ತಿಂಗಳ ಬಾಕಿ ವೇತನ ಮಂಜೂರು ಮಾಡಲು ಮತ್ತು ಮರು ನೇಮಕ ಮಾಡಿಕೊಳ್ಳಲು ಪಿಡಿಒ ಪ್ರೀತಿರಾಜ್ ಅವರು 17 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಧರಿಯಾಪುರ ಉಪ್ಪಿನ್ ಲೇಔಟ್‍ನಲ್ಲಿರುವ ಮನೆಯಲ್ಲಿ ಫೋನ್ ಪೇ ಮೂಲಕ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪ್ರೀತಿರಾಜ್ ಅವರನ್ನು ವಶಕ್ಕೆ ಪಡೆದಿದ್ದಾರೆ.