ಸರಳಿಕಟ್ಟೆ: ರಸ್ತೆ ದುರಸ್ತಿಗೆ ಆಗ್ರಹಿಸಿ ಎಸ್ಡಿಪಿಐ ಪ್ರತಿಭಟನೆ
ತೆಕ್ಕಾರು: ತೆಕ್ಕಾರು ಗ್ರಾಮ ವ್ಯಾಪ್ತಿಯ ಸಂಪೂರ್ಣ ಹದಗೆಟ್ಟ ರಸ್ತೆಗಳ ದುರಸ್ಥಿಗೆ ಆಗ್ರಹಿಸಿ ಎಸ್ ಡಿಪಿಐ ತೆಕ್ಕಾರು ಗ್ರಾಮ ಸಮಿತಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಈ ಬಗ್ಗೆ ಪ್ರಕಟಣೆ ಹೊರಡಿಸಿದೆ.
ತೆಕ್ಕಾರು ಗ್ರಾಮದ ಗೋದಾಮುಗುಡ್ಡೆ – ಗೋವಿಂದರಗುಳಿ- ಸರಳಿಕಟ್ಟೆ ರಸ್ತೆ ಮತ್ತು ಬಾಜಾರದಿಂದ ಜೋಡುಕಟ್ಟೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ಸಂಚಾರಕ್ಕೆ ಯೋಗ್ಯವಿಲ್ಲದ ರಸ್ತೆಯಂತಾಗಿದ್ದು, ಪದೇ ಪದೇ ಸುರಿಯುತ್ತಿರುವ ಮಳೆಯಿಂದ ಹೊಂಡಗಳು ನೀರಿನಿಂದ ತುಂಬಿದ್ದು ರಸ್ತೆಯ ಇಕ್ಕೆಗಳಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ಪಾದಚಾರಿಗಳು ಸಂಚಾರಕ್ಕೆ ತುಂಬಾ ತೊಂದರೆಗಳನ್ನು ಅನುಭವಿಸುವಂತಾಗಿದೆ.
ಸ್ಥಳೀಯರು ರಸ್ತೆ ದುರಸ್ಥಿಗೆ ಆಗ್ರಹಿಸಿ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಗಳು ಆಗಿಲ್ಲ, ಸ್ಥಳೀಯ ಶಾಸಕರಂತು ಈ ಭಾಗದಲ್ಲಿ ಯಾವುದೇ ಕಾಮಗಾರಿಗಳಿಗೆ ಅನುದಾನಗಳನ್ನು ಒದಗಿಸುತ್ತಿಲ್ಲ ಎಂಬುವುದು ಗ್ರಾಮಸ್ಥರ ಅಸಮಾಧಾನವಾಗಿದೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ ತೆಕ್ಕಾರು ಗ್ರಾಮ ಸಮಿತಿ ವತಿಯಿಂದ ದಿನಾಂಕ 13.12.2024 ರಂದು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಸರಳಿಕಟ್ಟೆ ಜಂಕ್ಷನ್ ನಲ್ಲಿ ಪ್ರತಿಭಟಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.