1.1 ಕೋಟಿಗೆ ರಾಜಸ್ಥಾನ ತಂಡದ ಪಾಲಾದ 13 ವರ್ಷದ ವೈಭವ್
ಜಿದ್ದಾ: ಐಪಿಎಲ್ 2025 ಹರಾಜು ಪ್ರಕ್ರಿಯೆಯ ಎರಡನೆ ದಿನವಾದ ಇಂದು 13 ವರ್ಷದ ಬಿಹಾರ ಕ್ರಿಕೆಟಿಗ ವೈಭವ್ ಸೂರ್ಯವಂಶಿ ರೂ. 1.1 ಕೋಟಿಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.ಈ ಮೂಲಕ ಬಿಹಾರದ ಬಾಲಕ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿ ಇತಿಹಾಸ ನಿರ್ಮಿಸಿದರು.
ಸೋಮವಾರ ಇಲ್ಲಿ ನಡೆದ ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿಯನ್ನು ರಾಜಸ್ಥಾನ್ ರಾಯಲ್ಸ್ ತಂಡವು ರೂ. 1.1 ಕೋಟಿ ಮೊತ್ತಕ್ಕೆ ಖರೀದಿಸಿತು.
ವೈಭವ್ ಸೂರ್ಯವಂಶಿಗಾಗಿ ರಾಜಸ್ಥಾನ್ ರಾಯಲ್ಸ್ ಹಾಗೂ ದಿಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿಯೇ ಏರ್ಪಟ್ಟಿತು. ಆದರೆ, ರಾಜಸ್ಥಾನ್ ರಾಯಲ್ಸ್ ತಂಡವು ವೈಭವ್ ಸೂರ್ಯವಂಶಿಯನ್ನು ಖರೀದಿಸಲು ರೂ. 1.10 ಕೋಟಿ ಮೊತ್ತವನ್ನು ಬಿಡ್ ಮಾಡಿದ್ದರಿಂದ, ದಿಲ್ಲಿ ಕ್ಯಾಪಿಟಲ್ಸ್ ತಂಡವು ಬಿಡ್ ನಿಂದ ಹಿಂದೆ ಸರಿಯಿತು.
2011ರಲ್ಲಿ ಜನಿಸಿದ ವೈಭವ್ ಸೂರ್ಯವಂಶಿ ನಾಲ್ಕು ವರ್ಷದ ಬಾಲಕರಾಗಿರುವಾಗಲೇ ತಮ್ಮ ಕ್ರಿಕೆಟ್ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಕ್ರಿಕೆಟ್ ನೆಡೆಗಿನ ವೈಭವ್ ಸೂರ್ಯವಂಶಿಯ ವ್ಯಾಮೋಹವನ್ನು ಗುರುತಿಸಿದ ಅವರ ತಂದೆ ಸಂಜೀವ್, ಮನೆಯ ಹಿಂಬದಿಯಲ್ಲಿ ಆತನಿಗಾಗಿ ಸಣ್ಣ ಆಟದ ಮೈದಾನವನ್ನು ನಿರ್ಮಿಸಲು ನಿರ್ಧರಿಸಿದರು.
12 ವರ್ಷ, 284 ದಿನಗಳ ವೈಭವ್ ಸೂರ್ಯವಂಶಿ, 1896ರ ನಂತರ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆಗೆ ಭಾಜನವಾಗಿದ್ದಾರೆ. ಅಲ್ಲದೆ, ರಣಜಿ ಟ್ರೋಫಿಯಲ್ಲಿ ಬಿಹಾರ ತಂಡವನ್ನು ಪ್ರತಿನಿಧಿಸಿದ ಎರಡನೆ ಅತ್ಯಂತ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ನಡೆದಿದ್ದ ಅಂಡರ್ 19 ಟೆಸ್ಟ್ ಪಂದ್ಯದ ಮೂಲಕ ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಕೇವಲ 62 ಎಸೆತಗಳಲ್ಲಿ ಅಮೋಘ 104 ರನ್ ಸಿಡಿಸಿದ್ದರು.