November 21, 2024

ಡ್ರೀಮ್ ಡೀಲ್” ಲಕ್ಕಿ ಡ್ರಾ ವಿಡಿಯೋ ವೈರಲ್ : ಸಿಕ್ಕಿಬಿದ್ದ ಉದ್ಯೋಗಿಗಳು ಸಂಸ್ಥೆಯಿಂದ ವಜಾಆಡಳಿತ ಮಂಡಳಿ ಸ್ಪಷ್ಟನೆ 

0

ಮಂಗಳೂರು: “ಡ್ರೀಮ್ ಡೀಲ್ ಗ್ರೂಪ್ ವತಿಯಿಂದ ಪ್ರತೀ ತಿಂಗಳು ಪ್ರಮೋಷನ್ ಗಾಗಿ ಗಿಫ್ಟ್ ನೀಡುತ್ತೇವೆ. ನಿನ್ನೆ ಲಕ್ಕಿ ಡ್ರಾ ಸಂದರ್ಭದಲ್ಲಿ ಉಬೈದ್ ಮತ್ತು ಹರ್ಷಿತ್ ಅನ್ನುವ ನಮ್ಮ ಕೆಲಸದವರು ಸಂಸ್ಥೆಗೆ ಮೋಸ ಮಾಡಿದ್ದಾರೆ. ಇದು ಗಮನಕ್ಕೆ ಬಂದ ತಕ್ಷಣವೇ ಮರು ಡ್ರಾ ಮಾಡಿದ್ದೇವೆ. ಬಳಿಕ ಅವರ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕಂಪೆನಿ ಮುಂದೆಯೂ ಜನರ ವಿಶ್ವಾಸಕ್ಕೆ ಬದ್ಧವಾಗಿದೆ. ಪೊಲೀಸ್ ಅಧಿಕಾರಿಗಳು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ“ ಎಂದು ಡ್ರೀಮ್ ಡೀಲ್ ಗ್ರೂಪ್ ನ ಆಡಳಿತ ನಿರ್ದೇಶಕ ಸುಹೈಲ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.


ಮಾಧ್ಯಮಗಳ ಜೊತೆ ಮಾತಾಡಿದ ಅವರು, ”ಡ್ರೀಮ್ ಡೀಲ್ ಸಂಸ್ಥೆಯು ಆರ್ ಬಿಐ ನಿಯಮಗಳ ಅನ್ವಯ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದಲ್ಲಿ 20000ಕ್ಕೂ ಅಧಿಕ ಮಂದಿ ಗ್ರಾಹಕರಿದ್ದಾರೆ. ಗ್ರಾಹಕರಿಗೆ ಪ್ರತೀ ತಿಂಗಳು 1000 ಪಾವತಿ ಮಾಡಿದರೆ ಅವರಿಗೆ ಕೂಪನ್ ನೀಡಲಾಗುತ್ತದೆ. ಲಕ್ಕಿ ಡ್ರಾ ಮೂಲಕ ಆಯ್ಕೆಯಾಗುವ ಗ್ರಾಹಕರಿಗೆ ಮಹಿಂದ್ರಾ ಥಾರ್ ಮತ್ತಿತರ ಉಡುಗೊರೆಗಳನ್ನು ಸಂಸ್ಥೆ ನೀಡುತ್ತಾ ಬಂದಿದೆ. ನಿನ್ನೆ ಡ್ರಾ ಸಂದರ್ಭದಲ್ಲಿ ಯೂಟ್ಯೂಬ್ ಲೈವ್ ಇದ್ದರೂ ಸಂಸ್ಥೆಯ ಇಬ್ಬರು ಕೆಲಸಗಾರರು ಬೇರೊಂದು ಚೀಟಿಯನ್ನು ಉದ್ದೇಶಪೂರ್ವಕವಾಗಿ ಅದರಲ್ಲಿ ಹಾಕಿದ್ದಾರೆ. ಆದರೆ ಆ ನಂಬರ್ ಎತ್ತಿ ಡ್ರಾ ಮಾಡಲಾಗಿಲ್ಲ. ಸಂಸ್ಥೆಯು ಗ್ರಾಹಕರ ಹಿತದೃಷ್ಟಿಯಿಂದ ಇಬ್ಬರಿಗೆ ಲಕ್ಕಿ ಡ್ರಾ ಮಾಡಿದೆ. ಸಂಸ್ಥೆಗೆ ಗ್ರಾಹಕರು ಮುಖ್ಯ“ ಎಂದರು.


”ಪ್ರಸ್ತುತ  ಡ್ರೀಮ್ ಡೀಲ್ ಗ್ರೂಪ್ ಗೆ 15ಕ್ಕೂ ಹೆಚ್ಚು ಬ್ರಾಂಚ್ ಗಳು ರಾಜ್ಯಾದ್ಯಂತ ಕಾರ್ಯಾಚರಿಸುತ್ತಿವೆ. ಎಲ್ಲ ಕಡೆಗಳಲ್ಲಿ ಗ್ರಾಹಕಸ್ನೇಹಿಯಾಗಿ ಸಂಸ್ಥೆ ಮತ್ತು ನೌಕರರು ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿ ನಡೆದಿರುವ ಘಟನೆಯಲ್ಲಿ ಸಂಸ್ಥೆ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ. ತಪ್ಪತಸ್ಥ ಕೆಲಸಗಾರರನ್ನು ಈಗಾಗಲೇ ಕೆಲಸದಿಂದ ತೆಗೆದುಹಾಕಲಾಗಿದೆ ಮತ್ತು ಕಾನೂನು ಕ್ರಮ ಜರುಗಿಸಲಾಗುತ್ತದೆ“ ಎಂದರು.
”ಡ್ರೀಮ್ ಡೀಲ್ ಗ್ರೂಪ್ ಮುಂದಿನ ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸುವ ಉದ್ದೇಶವಿದ್ದು ಅದಕ್ಕಾಗಿ ಯೋಜನೆ ರೂಪಿಸಲಾಗಿದೆ. ಎಲ್ಲ ಬ್ರಾಂಚ್ ಗಳಲ್ಲೂ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಮೋಸ ವಂಚನೆಯಾಗದಂತೆ ಕಾರ್ಯ ನಿರ್ವಹಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಹಕರಿಂದಲೇ ಪಾರದರ್ಶಕವಾಗಿ ಲಕ್ಕಿ ಡ್ರಾ ನಡೆಸಲಾಗುವುದು“ ಎಂದು ಹೇಳಿದರು.
ಸಂಸ್ಥೆಯ ಅಡ್ವೈಸರಿ ಬೋರ್ಡ್ ಮೆಂಬರ್ ಕಿಶನ್ ಭಟ್, ಸಿಇಓ ಸಾಜಿದ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!