March 28, 2026

ಜೋಗಿಬೆಟ್ಟು ರಿಫಾಯೀ ಜುಮಾ ಮಸೀದಿಯಲ್ಲಿ ಸ್ಪೀಕರ್ ಯು.ಟಿ.ಖಾದರ್ ತೂಕದಷ್ಟು ಸಕ್ಕರೆ ಹರಕೆ: ಸ್ಪೀಕರ್ ಆಗುವ ಸಂದರ್ಭ “ನೇರ್ಚೆ” ಹೊತ್ತಿದ್ದ ಖಾದರ್ ಅಭಿಮಾನಿಗಳು

0
image_editor_output_image1039668940-1732022305896

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಮಂಗಳವಾರ (19/11/2024) ಇತಿಹಾಸ ಪ್ರಸಿದ್ಧ ಉಪ್ಪಿನಂಗಡಿ ಸಮೀಪದ ಜೋಗಿಬೆಟ್ಟು ರಿಫಾಯೀ ಜುಮಾ ಮಸೀದಿಗೆ ತೆರಳಿ ತನಗಾಗಿ ಅಭಿಮಾನಿಗಳು ಹರಕೆ ಹೊತ್ತ ಇಷ್ಟಾರ್ಥ ಕಾರ್ಯ ಸಿದ್ಧಿಗಾಗಿ ತುಲಾಭಾರ ನಡೆಸಿ ತನ್ನಷ್ಟೇ ತೂಕದ ಸಕ್ಕರೆಯನ್ನು ದಾನ ಮಾಡಿದರು. ಅವರ ತೂಕದ 80 ಕಿಲೋ ಗ್ರಾಮ್ ಹಾಗೂ ಉಳಿದ 20 ಕಿಲೋಗ್ರಾಮ್ ಅವರ ಮಗಳು ಹವ್ವಾ ಅವರ ಭವಿಷ್ಯಕ್ಕಾಗಿ ಸಕ್ಕರೆ ಹರಕೆ ಸಲ್ಲಿಸಲಾಯಿತು. ಜೋಗಿಬೆಟ್ಟು ಮಸೀದಿ ಅಧ್ಯಕ್ಷ ಎಂ.ಜಿ. ಅಬೂಬಕರ್ ಪುತ್ತು ಅವರ “ರಿಫಾಯೀ ಮಹಲ್” ಮನೆಗೆ ಖಾಸಗಿ ಭೇಟಿ ನೀಡಿದ ಸಂದರ್ಭ ಸ್ಪೀಕರ್ ಮಸೀದಿಗೆ ತೆರಳಿದರು.

ಕಾರುಣ್ಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಔಲಿಯಾ ನೇತಾರ ಶೈಖ್ ರಿಫಾಯೀ (ರ.ಅ.) ರವರ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಗಡಿಪ್ರದೇಶದ ಉಪ್ಪಿನಂಗಡಿಯ ಜೋಗಿಬೆಟ್ಟು ರಿಫಾಯೀ ಜುಮಾ ಮಸೀದಿ “ಸಕ್ಕರೆ ಹರಕೆ”ಗೆ ಪ್ರಸಿದ್ಧಿ ಪಡೆದಿದೆ. ಒಳ್ಳೆಯ ಕಾರ್ಯಕ್ಕಾಗಿ, ಇಷ್ಟಾರ್ಥ ಸಿದ್ಧಿಗಾಗಿ ಮತ್ತು ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯಾದ್ಯಂತ ಜಾತಿ ಮತ ಬೇಧವಿಲ್ಲದೇ ಎಲ್ಲರೂ ಇಲ್ಲಿ ಸಕ್ಕರೆಯನ್ನು ದಾನ ಮಾಡುತ್ತಾರೆ. ಇದರಿಂದ ಅದ್ಭುತವಾದ ಫಲಿತಾಂಶ, ಯಶಸ್ಸನ್ನು ಕೂಡಾ ಕಾಣುತ್ತಾರೆ. ಪ್ರತಿವರ್ಷ ಈ ಮಸೀದಿಯಲ್ಲಿ ನಡೆಯುವ ರಿಫಾಯೀ ರಾತೀಬ್ ಗೆ ಭಕ್ತಾದಿಗಳು ಆಗಮಿಸಿ ಷಕ್ಕರೆ ಹರಕೆ ಸಲ್ಲಿಸುವುದು ಹಿಂದಿನ ಕಾಲದಿಂದಲೂ ಆಚರಣೆಯಲ್ಲಿದೆ. ಯು.ಟಿ. ಖಾದರ್ ಗೆ ಉನ್ನತ ಹುದ್ದೆ ಪ್ರಾಪ್ತಿಯಾಗಲು ಅಭಿಮಾನಿಗಳು ಅಂದು ಸಲ್ಲಿಸಿದ್ದ ಹರಕೆಯನ್ನು ಇಂದು ನೆರವೇರಿಸಲಾಯಿತು. ಜೋಗಿಬೆಟ್ಟು ಜಮಾಅತ್ ಪರವಾಗಿ ಸ್ಪೀಕರ್ ಅವರಿಗೆ ಶಾಲು ಹೊದಿಸಿ ಸಾಂಪ್ರದಾಯಿಕ ಟೋಪಿ ತೊಡಿಸಿ ಗೌರವಿಸಲಾಯಿತು.

ಜೋಗಿಬೆಟ್ಟು ರಿಫಾಯೀ ಜುಮಾ ಮಸೀದಿ ಅಧ್ಯಕ್ಷ, ಉದ್ಯಮಿ ಎಂ.ಜಿ. ಅಬೂಬಕರ್ ಪುತ್ತು ಉಪ್ಪಿನಂಗಡಿ, ಮಸೀದಿ ಧರ್ಮಗುರು ಕಲಂದರ್ ಮದನಿ, ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಡಿ ಗ್ರೂಪ್ ವಿಟ್ಲ ಇದರ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪತ್ರಕರ್ತ ಮಹಮ್ಮದಲಿ ವಿಟ್ಲ, ಸದರ್ ಸುಲೈಮಾನ್ ಮುಸ್ಲಿಯಾರ್, ಅಬೂಬಕರ್ ಸಖಾಫಿ, ಮಸೀದಿಯ ಕೋಶಾಧಿಕಾರಿ ಮಹಮ್ಮದ್ ಕುಂಞಿ, ಜೊತೆ ಕಾರ್ಯದರ್ಶಿ ಅಬ್ದುಲ್ ರಝಾಕ್ ಮೇಲ್ಮನೆ, ಎಂ.ಜಿ. ಅಶ್ರಫ್, ದಾವೂದ್ ಜಿ.ಕೆ., ಸಾಬಿತ್ ಮೇಲ್ಮನೆ, ಉಮರ್ ಮೇಲ್ಮನೆ, ರಫೀಕ್ ಎಂ.ಎಸ್., ಫಾರೂಕ್ ಮೇದರಬೆಟ್ಟು, ಹಮೀದ್ ಕನರಾಜೆ, ಅಬೂಸಾಲಿ ಚೆಯ್ಯೋನು, ಸಫ್ವಾನ್, ಸಲೀತ್, ಓ.ಕೆ. ಔಸ್, ಮುನೀಶ್ ಎಂ.ಜಿ., ಬದ್ರುದ್ದೀನ್, ಆಕಿಫ್, ನುಹಾಸ್, ಅಮಾನ್ ವಿಟ್ಲ, ಸಾಬಿತ್ ಸಾಲೆತ್ತೂರು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!