ಪಕ್ಷಿಕೆರೆಯಲ್ಲಿ ಪತ್ನಿ ಹಾಗೂ ಮಗುವನ್ನು ಹತ್ಯೆಗೈದು ಪತಿ ಆತ್ಮ ಹತ್ಯೆ ಪ್ರಕರಣಕ್ಕೆ ತಿರುವು: ಕಾರ್ತಿಕ್ ತಾಯಿ ಹಾಗೂ ಸಹೋದರಿ ಬಂಧನ
ಮಂಗಳೂರು: ಹೊರ ವಲಯ ಪಕ್ಷಿಕೆರೆಯ ಪ್ಲ್ಯಾಟ್ ವೊಂದರಲ್ಲಿ ಪತ್ನಿ ಹಾಗೂ ಮಗುವನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ರಾಜ್ಯವನ್ನೆ ಬೆಚ್ಚಿ ಬೀಳಿಸಿದ ಘೋರ ಪ್ರಕರಣ ರೋಚಕ ತಿರುವು ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಕಾರ್ತಿಕ್ ತಾಯಿ ಶ್ಯಾಮಲಾ ಭಟ್, ಸಹೋದರಿ ಕಣ್ಮಣಿ ಬಂಧಿತರು.
ಆರೋಪಿಗಳಿಬ್ಬರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿತ್ತು. ಸಾಯುವುದಕ್ಕೆ ಮುಂಚೆ ಕಾರ್ತಿಕ್ ಭಟ್ ಬರೆದಿಟ್ಟಿದ್ದ 6 ಪುಟದ ಡೆತ್ ನೋಟ್ ಆಧಾರದಲ್ಲಿ ಮುಲ್ಕಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದಲ್ಲದೇ, ಹತ್ಯೆಯಾದ ಕಾರ್ತಿಕ್ ಪತ್ನಿ ಪ್ರಿಯಾಂಕಳ ಮನೆಯವರು ಕಾರ್ತಿಕ್ ತಂದೆ ತಾಯಿ ಹಾಗೂ ಸಹೋದರಿ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದರು.
ಡೆತ್ ನೋಟ್ ನಲ್ಲಿ ಏನಿತ್ತು?
ಪತ್ನಿ ಪ್ರಿಯಾಂಕ ಹಾಗೂ 4 ತಿಂಗಳ ಮಗು (ಹೃದಯ್) ನನ್ನು ಗಾಜಿನ ತುಂಡನ್ನು ಚುಚ್ಚಿ ಕೊಂದ ಬಳಿಕ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂಚೆ ಕಾರ್ತಿಕ್ ಸುದೀರ್ಘ ಡೆತ್ ನೋಟ್ ಒಂದನ್ನು ಬರೆದಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅದರಲ್ಲಿ ಉಲ್ಲೇಖಿಸಿರುವ ಅಂಶದ ಆಧಾರದಲ್ಲೆ ಪ್ರಕರಣ ದಾಖಲಾಗಿದೆ. ಡೆತ್ ನೋಟ್ʼನಲ್ಲಿ ಕುಟುಂಬ ಕಲಹದ ಬಗ್ಗೆ ಬರೆಯಲಾಗಿತ್ತು. ಅದರಲ್ಲಿ ತಂದೆ, ತಾಯಿ ಮತ್ತು ಸಹೋದರಿ ವಿರುದ್ದ ಗುರುತರ ಆರೋಪ ಮಾಡಿದ್ದ ಕಾರ್ತಿಕ್ ಭಟ್, ಇಂತಹ ಅಪ್ಪ ಅಮ್ಮ ಯಾರಿಗೂ ಸಿಗಬಾರದೆಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದರು. ಡೆತ್ ನೋಟ್ ನಲ್ಲಿ ತಮ್ಮ ಅಂತ್ಯಸಂಸ್ಕಾರವನ್ನು ಅತ್ತೆ ಮಾವ ನಡೆಸಿಕೊಡಬೇಕೆಂದು ಕೂಡ ಬರೆದಿದ್ದರು.
ಆರೋಪಿಗಳನ್ನು ಬಂಧಿಸಿದ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದು, ಆರೋಪಿಗಳಿಬ್ಬರಿಗೂ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಪಕ್ಷಿಕೆರೆಯ ಪ್ಲ್ಯಾಟ್ ನಲ್ಲಿ ಕಾರ್ತಿಕ್ ಜತೆ ತಂದೆ ಜನಾರ್ಧನ ಭಟ್, ತಾಯಿ ಶ್ಯಾಮಲ ಭಟ್, ಪತ್ನಿ ಪ್ರೀಯಾಂಕ ಹಾಗೂ ಪುತ್ರ ಹೃದಯ್ ವಾಸಿಸುತ್ತಿದ್ದರು. ಮೂರು ವರ್ಷಗಳಿಂದ ತಂದೆ ತಾಯಿ ಜತೆ ಕಾರ್ತಿಕ್ ಹಾಗೂ ಅವರ ಪತ್ನಿಯ ಸಂಬಂಧ ಹಳಸಿತ್ತು. ಜನಾರ್ಧನ್ ಹಾಗೂ ಶ್ಯಾಮಲರವರು ಪಕ್ಷಿಕೆರೆಯಲ್ಲಿ ಸಣ್ಣ ಹೋಟೆಲ್ ವೊಂದನ್ನು ನಡೆಸುತ್ತಿದ್ದರು. ಅವರು ಬೆಳಿಗ್ಗೆ ಬೇಗ ಮನೆಯಿಂದ ಹೋಟೇಲ್ ಗೆ ತೆರಳುತ್ತಿದ್ದರು. ಅವರು ಹೊಟೇಲ್ ಗೆ ಹೋಗಿದ್ದ ಸಂದರ್ಭ ಕಾರ್ತಿಕ್ ಪತ್ನಿ ಹಾಗೂ ಪುತ್ರನನ್ನು ಹತ್ಯೆ ಮಾಡಿದ್ದ.




