ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಮೇಲೆ ರೌಡಿ ಶೀಟ್ ಇಲ್ಲ: ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ
ಹಾವೇರಿ: ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಮೇಲೆ ರೌಡಿ ಶೀಟ್ ಇಲ್ಲ ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.

ಯಾಸಿರ್ ಮೇಲೆ ರೌಡಿ ಶೀಟ್ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲೇ ಹಾವೇರಿ ಎಸ್ಪಿ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಮೇಲೆ ರೌಡಿ ಶೀಟ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ಈ ಕುರಿತಂತೆ ಹಾವೇರಿ ಜಿಲ್ಲಾ ಅಧೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಯಾಸೀರ್ ಅಹ್ಮದ್ ತಂದೆ ಮೊಹ್ಮದ್ ಖಾನ್ ಪಠಾಣ, ಬೊಮ್ಮನಹಳ್ಳಿ, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ ಇವರ ಮೇಲೆ ರೌಡಿ ಶೀಟ್ ಇದೆ ಅಂತ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಇರುತ್ತದೆ ಎಂದಿದ್ದಾರೆ. ಡಿಎಸ್ಪಿ ಶಿಗ್ಗಾವಿ ಹಾಗೂ ಪಿಐ ಶಿಗ್ಗಾವಿ ಅವರ ಕಚೇರಿಯ ದಾಖಲಾತಿಗಳನ್ನು ಪರಿಶೀಲಿಸಲಾಗಿ, ಪ್ರಸ್ತುತ ಯಾಸೀರ್ ಅಹ್ಮದ್ ತಂದೆ ಮೊಹಮ್ಮದ್ ಖಾನ್ ಪಠಾಣ ಅವರ ಮೇಲೆ ಯಾವುದೇ ರೀತಿ ರೌಡಿ ಶೀಟ್ ಇರುವುದಿಲ್ಲ ಎಂಬುದಾಗಿ ಹಾವೇರಿ ಪೊಲೀಸ್ ಅಧೀಕ್ಷಕರು ಸ್ಪಷ್ಟ ಪಡಿಸಿದ್ದಾರೆ.




