ಹಮಾಸ್ ಉನ್ನತ ನಾಯಕ ಸಿನ್ವರ್ ಹತ್ಯೆಗೆ ಪ್ರತಿರೋಧ: ಇಸ್ರೇಲ್ ಪ್ರಧಾನಿಯ ನಿವಾಸದ ಮೇಲೆ ಡ್ರೋನ್ ದಾಳಿ
ಸಿಸೇರಿಯಾದಲ್ಲಿರುವ ಪ್ರಧಾನಿ ನಿವಾಸದ ಮೇಲೆ ಮಾನವ ರಹಿತ ವೈಮಾನಿಕ ವಾಹನ (ಯುಎವಿ) ಉಡಾಯಿಸಲಾಗಿದೆ. ಪ್ರಧಾನ ಮಂತ್ರಿ ಮತ್ತು ಅವರ ಪತ್ನಿ ಈ ಸಂದರ್ಭದಲ್ಲಿ ಮನೆಯಲ್ಲಿ ಇರಲಿಲ್ಲ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಪ್ರಧಾನ ಮಂತ್ರಿ ಕಚೇರಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಲೆಬನಾನ್‌ನಿಂದ ಡ್ರೋನ್ ಅನ್ನು ಉಡಾವಣೆ ಮಾಡಲಾಗಿದ್ದು ನೆತನ್ಯಾಹು ಅವರ ನಿವಾಸದ ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಈ ಹಿಂದೆ ಹೇಳಿತ್ತು. ಇಸ್ರೇಲ್ ಗಡಿಯನ್ನು ದಾಟಿದ ಇನ್ನೂ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಮದು ರಾಯಿಟರ್ಸ್ ವರದಿ ಮಾಡಿದೆ.
ಈ ಡ್ರೋನ್ ದಾಳಿ ಹೊಣೆಯನ್ನು ಇನ್ನೂ ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲ. ಒಂದು ವರ್ಷದಿಂದ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಯುದ್ಧ ಮಾಡುತ್ತಿದ್ದು, ಇರಾನ್, ಲೆಬನಾನ್ ಇಸ್ರೇಲ್ ವಿರುದ್ಧ ತಿರುಗಿಬಿದ್ದಿವೆ. ಹಮಾಸ್ ಉಗ್ರ ಸಂಘಟನೆ ಸದಸ್ಯರು ಏಕಾಏಕಿ ಇಸ್ರೇಲ್ ಮೇಲೆ ದಾಳಿ ಮಾರಣಹೋಮ ನಡೆಸಿದ ನಂತರ ಈ ಸಂಘರ್ಷ ಆರಂಭವಾಗಿದೆ.
ಹಮಾಸ್ ಸಂಘಟನೆಯ ಮಿತ್ರ ಲೆಬನಾನ್‌ನ ಹಿಜ್ಬುಲ್ಲಾ ಕೂಡ ಇಸ್ರೇಲ್ ವಿರುದ್ಧ ಯುದ್ಧ ಮಾಡುತ್ತಿದೆ. ಕಳೆದ ತಿಂಗಳು ಇಸ್ರೇಲ್ ಲೆಬನಾನಿನ ಗಡಿಯಾದ್ಯಂತ ಸೇನಾ ಪಡೆಗಳನ್ನು ಕಳಿಸಿ ಕಾರ್ಯಾಚರಣೆ ನಡೆಸಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸಂಘರ್ಷ
ಸದ್ಯದ ಪರಿಸ್ಥಿತಿಯಲ್ಲಿ ಈ ಸಂಘರ್ಷ ನಿಲ್ಲುವಂತೆ ಕಾಣುತ್ತಿಲ್ಲ, ಹಿಜ್ಬುಲ್ಲಾದ ಪ್ರಾದೇಶಿಕ ಕಮಾಂಡ್ ಸೆಂಟರ್ ವೈಮಾನಿಕ ದಾಳಿಯಲ್ಲಿ ನಾಶಪಡಿಸುವುದಾಗಿ ಇಸ್ರೇಲ್ ಹೇಳಿಕೆ ನೀಡಿದ ಒಂದು ದಿನದ ಬಳಿಕ ಲೆಬನಾನ್‌ನಿಂದ ಡ್ರೋನ್ ದಾಳಿ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳ ಅಂತ್ಯದಿಂದ ಈವರೆಗೆ ಯುದ್ಧದಲ್ಲಿ ಲೆಬನಾನ್‌ನಲ್ಲಿ ಕನಿಷ್ಠ 1,418 ಜನ ಮೃತಪಟ್ಟಿರುವುದಾಗಿ ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ದಕ್ಷಿಣ ಗಾಜಾದಲ್ಲಿ ಇಸ್ರೇಲ್ ರಕ್ಷಣಾಪಡೆಗಳ ಕಾರ್ಯಾಚರಣೆಯಲ್ಲಿ ಹಮಾಸ್ ಮುಖ್ಯಸ್ಥ ಸಿನ್ವಾರ್ ಹತ್ಯೆಯಾದ ಬಳಿಕ ಮಧ್ಯಪ್ರಾಚ್ಯದಲ್ಲಿ ಸಂಘರ್ಷವು ಮತ್ತಷ್ಟು ತೀವ್ರಗೊಳ್ಳುವ ಆತಂಕ ಶುರುವಾಗಿದೆ. 1,200 ಕ್ಕೂ ಹೆಚ್ಚು ಇಸ್ರೇಲಿಗಳನ್ನು ಕೊಂದ ಮತ್ತು 250 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಗಾಜಾಕ್ಕೆ ಕರೆತಂದ ಅಕ್ಟೋಬರ್ 7ರ ದಾಳಿಯ ಮಾಸ್ಟರ್ ಮೈಂಡ್, ಸಿನ್ವಾರ್ ನನ್ನು ಇಸ್ರೇಲ್ ಹುಡುಕಿ ಹತ್ಯೆ ಮಾಡಿದೆ.