ಹೈಟಿ: ಗ್ಯಾಸೊಲಿನ್ ಸಾಗಿಸುತ್ತಿದ್ದ ಟ್ರಕ್ ಸ್ಫೋಟ:
60ಕ್ಕೂ ಹೆಚ್ಚು ಮಂದಿ ಮೃತ್ಯು, ಹಲವರು ಜನರು ಗಾಯ
ಹೈಟಿ: ಉತ್ತರ ಹೈಟಿಯಲ್ಲಿ ಮಂಗಳವಾರ ಗ್ಯಾಸೊಲಿನ್ ಸಾಗಿಸುತ್ತಿದ್ದ ಟ್ರಕ್‌ವೊಂದು ಸ್ಫೋಟಗೊಂಡು 60 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಸುಮಾರು 9 ಸಾವಿರ ಗ್ಯಾಲನ್ ಇಂಧನವನ್ನು ಸಾಗಿಸುತ್ತಿದ್ದ ಟ್ರಕ್, ಕ್ಯಾಪ್-ಹೈಟಿಯನ್ ನಗರದ ವಸತಿ ಪ್ರದೇಶದಲ್ಲಿ ಉರುಳಿಬಿದ್ದಿದೆ. ಮಧ್ಯರಾತ್ರಿಯ ಸುಮಾರಿಗೆ ಟ್ರಕ್ ಸ್ಫೋಟಗೊಳ್ಳುವ ಮುನ್ನ ಅದರಲ್ಲಿರುವ ಗ್ಯಾಸೊಲಿನ್ ಅನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ, ಟ್ರಕ್ ಸ್ಫೋಟಗೊಂಡು ಅಲ್ಲಿಂದ 300 ಅಡಿ ವ್ಯಾಪ್ತಿಯಲ್ಲಿರುವ ಎಲ್ಲವನ್ನೂ ಸುಟ್ಟುಹಾಕಿತು ಎಂದು ಉತ್ತರ ಹೈಟಿಯ ಅಗ್ನಿಶಾಮಕ ದಳದ ಮುಖ್ಯಸ್ಥ ಫ್ರಾಂಡಿ ಜೀನ್ ತಿಳಿಸಿದರು.
‘ನಾನು ಅಗ್ನಿಶಾಮಕ ದಳಕ್ಕೆ ಸೇರಿದ 17 ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಭೀಕರ ಅವಘಡವನ್ನು ಕಂಡಿದ್ದೇನೆ. ಈ ದುರಂತದಲ್ಲಿ ನಾನು ಬದುಕುಳಿದಿರುವುದೇ ಹೆಚ್ಚು’ ಎಂದು 49 ವರ್ಷದ ಜೀನ್ ತಿಳಿಸಿದ್ದಾರೆ.





