ಪುತ್ತೂರು: ಸಾಲ ಮರುಪಾವತಿಸಲು ಮನೆಗೆ ಹೋದ ಬ್ಯಾಂಕ್ ಸಿಬ್ಬಂದಿ: ಪಿಸ್ತೂಲ್ ತೋರಿಸಿ ಬೆದರಿಕೆ ಪ್ರಕರಣ ದಾಖಲು
ಪುತ್ತೂರು: ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿಯೊಬ್ಬರ ಮನೆಗೆ ಹೋದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಪಿಸ್ತೂಲ್ ತೋರಿಸಿ ಬೆದರಿಸಿದ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ರಿಲೇಶನ್ ಶಿಪ್ ಮ್ಯಾನೇಜರ್ ಕರ್ತವ್ಯ ನಿರ್ವಹಿಸುತ್ತಿರುವ ಚಿಕ್ಕಮಗಳೂರು ಕೊಪ್ಪ ತಾಲೂಕು ನಿವಾಸಿಯಾದ ಚೈತನ್ಯ ಹೆಚ್.ಸಿ (40)ರವರ ದೂರಿನಂತೆ, ಸದ್ರಿ ಬ್ಯಾಂಕ್ ನಲ್ಲಿ ಪುತ್ತೂರು ತಾಲೂಕು, ಬಲ್ನಾಡು ಗ್ರಾಮದ ಉಜಿರ್‌ಪಾದೆ ನಿವಾಸಿ ಶ್ರೀಮತಿ ಕೀರ್ತಿ ಅಖಿಲೇಶ್ ಎಂಬವರು ರೂ 2 ಕೋಟಿ ಸಾಲ ಮಾಡಿದ್ದು, ಸದ್ರಿ ಸಾಲ ಮರುಪಾವತಿ ಮಾಡದೇ NPA ಆಗಿರುತ್ತದೆ. ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್ ನೋಟೀಸ್ ಮಾಡಿದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರುವುದಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ, ಸೆ. 25ರಂದು ಮಧ್ಯಾಹ್ನ, ಚೈತನ್ಯ ಹೆಚ್.ಸಿ ಅವರು ಸಹೋದ್ಯೋಗಿಗಳಾದ ಆಕಾಶ್ ಚಂದ್ರಬಾಬು ಮತ್ತು ಶ್ರೀಮತಿ ದಿವ್ಯಶ್ರೀರವರೊಂದಿಗೆ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಉಜಿರ್‌ಪಾದೆಯಲ್ಲಿರುವ ಶ್ರೀಮತಿ ಕೀರ್ತಿ ಅಖಿಲೇಶ್ ರವರ ಮನೆಗೆ ಹೋದಾಗ ಮನೆಯಲ್ಲಿದ್ದ ಶ್ರೀಮತಿ ಅರುಣ್ ಕಿಶೋರ್ ರವರು ಮನೆ ಒಳಗೆ ಬರಮಾಡಿಕೊಂಡಿರುತ್ತಾರೆ.
ಬಳಿಕ ಅಖಿಲೇಶ್ ರವರಿಗೆ ಕರೆ ಮಾಡಿ ವಿಚಾರ ತಿಳಿಸಿರುತ್ತಾರೆ. ಅಖಿಲೇಶ್ ರವರು ಮನೆಗೆ ಬಂದು, ಚೈತನ್ಯ ಹೆಚ್.ಸಿ ಮತ್ತು ಜೊತೆಗಿದ್ದವರು ಮನೆಗೆ ಬಂದ ಬಗ್ಗೆ ತಕರಾರು ತೆಗೆದು ಗದರಿಸಿರುವುದಲ್ಲದೇ, ತಂದೆ ಬರುವ ತನಕ ಕೂರುವಂತೆ ಮನೆಯ ಬಾಗಿಲು ಹಾಕಿ ಬಲವಂತವಾಗಿ ಕೂರಿಸಿರುತ್ತಾರೆ. ಬಳಿಕ ಕೃಷ್ಣ ಕಿಶೋರ್ ರವರು ಕೂಡಾ ಮನೆಗೆ ಬಂದು ಬ್ಬ್ಯಾಂಕ್ ನವರು ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ ಪಿಸ್ತೂಲ್ ತೋರಿಸಿ ಶೂಟ್ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಸೆ.26 ರಂದು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ,ಕ್ರ 109/2024, ಕಲಂ:- 132, 127(2),351(2),r/w 3(5)ಬಿ.ಎನ್.ಎಸ್ ಮತ್ತು ಕಲಂ 27 ARMS Act ರಂತೆ ಪ್ರಕರಣ ದಾಖಲಾಗಿದೆ.