ಕಮಲ್ ಮೌಲಾ ಮಸೀದಿ ದೇವಸ್ಥಾನಕ್ಕೆ ಸೇರಿದ್ದು: ಹೈಕೋರ್ಟ್ ತೀರ್ಪು
ಭೋಪಾಲ್: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ದಶಕಗಳಿಂದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾ ಆವರಣವನ್ನು ದೇವಸ್ಥಾನ ಎಂದು ಘೋಷಿಸಿದೆ.
ಹೈಕೋರ್ಟ್‌ನ ಇಂದೋರ್ ಪೀಠವು ಈ ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಸಂಪೂರ್ಣ ಹಕ್ಕಿದೆ ಎಂದು ಎತ್ತಿಹಿಡಿದಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಆಧರಿಸಿ ನ್ಯಾಯಾಲಯವು ಈ ನಿರ್ಧಾರಕ್ಕೆ ಬಂದಿದೆ. ಸಮೀಕ್ಷೆಯ ವರದಿಯು ಈ ಸ್ಥಳವು ಮೂಲತಃ ದೇವಸ್ಥಾನವಾಗಿತ್ತು ಎಂಬುದನ್ನು ಸಾಕ್ಷ್ಯಾಧಾರಗಳೊಂದಿಗೆ ದೃಢಪಡಿಸಿತ್ತು.
ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ತಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಐತಿಹಾಸಿಕ ತೀರ್ಪನ್ನು ನೀಡಿದೆ. ಮೇ 12 ರಂದು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಲಾಗಿದೆ.
ವಿವಾದಿತ ಇಡೀ ಸಂಕೀರ್ಣವು ಮೂಲತಃ ವಾಗ್ದೇವಿ (ಸರಸ್ವತಿ ದೇವಸ್ಥಾನ) ಮತ್ತು ರಾಜ ಭೋಜ ಸ್ಥಾಪಿಸಿದ್ದ ಸಂಸ್ಕೃತ ಅಧ್ಯಯನ ಕೇಂದ್ರವಾಗಿತ್ತು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಪ್ರಸ್ತುತ ಇರುವ ಮಸೀದಿ ರಚನೆಯನ್ನು ಹಳೆಯ ದೇವಸ್ಥಾನದ ಅವಶೇಷಗಳು ಮತ್ತು ಸ್ತಂಭಗಳನ್ನು ಬಳಸಿ ಮರುನಿರ್ಮಾಣ ಮಾಡಲಾಗಿದೆ. ಸಮೀಕ್ಷೆಯಲ್ಲಿ ಪತ್ತೆಯಾದ ಪರಮಾರ ರಾಜರ ಕಾಲದ ಸಂಸ್ಕೃತ ಮತ್ತು ಪ್ರಾಕೃತ ಶಾಸನಗಳು, ಕೆತ್ತನೆಗಳು, ಹಾಗೂ ಬ್ರಹ್ಮ, ಗಣೇಶ ಸೇರಿದಂತೆ 94ಕ್ಕೂ ಹೆಚ್ಚು ಹಿಂದೂ ದೇವತೆಗಳ ಭಿನ್ನವಾಗಿರುವ ವಿಗ್ರಹಗಳು ಈ ಸ್ಥಳವು ದೇವಸ್ಥಾನವಾಗಿತ್ತು ಎಂಬುದನ್ನು ದೃಢಪಡಿಸುತ್ತದೆ ಎಂದು ತಿಳಿಸಿದೆ.
ಪ್ರಸ್ತುತ ಇರುವ ಕಮಲ್ ಮೌಲಾ ಮಸೀದಿಯನ್ನು ಮುಸ್ಲಿಂ ಆಡಳಿತಗಾರರ ಕಾಲದಲ್ಲಿ ಪೂರ್ವ ಅಸ್ತಿತ್ವದಲ್ಲಿದ್ದ ಹಿಂದೂ ದೇವಸ್ಥಾನದ ಸ್ತಂಭಗಳು, ಕಲ್ಲುಗಳು ಮತ್ತು ಅವಶೇಷಗಳನ್ನು ಬಳಸಿ ನಿರ್ಮಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ
ASI ಸಮೀಕ್ಷೆಯು ಏಕಪಕ್ಷೀಯವಾಗಿದೆ ಮತ್ತು ಮುಸ್ಲಿಂ ಅರ್ಜಿದಾರರ ಹಕ್ಕನ್ನು ಕಡೆಗಣಿಸಲಾಗಿದೆ ಎಂಬ ಕಮಲ್ ಮೌಲಾ ಮಸೀದಿ ಸಮಿತಿಯ ವಾದಗಳನ್ನು ಹೈಕೋರ್ಟ್ ತಿರಸ್ಕರಿಸಿದೆ.
ಧಾರ್ಮಿಕ ಸ್ಥಳಗಳ ಸಂರಕ್ಷಣೆ ಮತ್ತು ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.





