ಭಾರಿ ಗಾಳಿ-ಮಳೆಗೆ ಮನೆಯ ಮೇಲ್ಛಾವಣಿ ಕುಸಿತ: ಒಂದೇ ಕುಟುಂಬದ ನಾಲ್ವರು ಸಾವು
ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾದ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತರನ್ನು ಗುರುನಾಥ ಬಡಿಗೇರ (35), ಅವರ ಪತ್ನಿ ಜ್ಯೋತಿ ಬಡಿಗೇರ (28), ಪುತ್ರಿಯರಾದ ಕಾಳಮ್ಮ ಬಡಿಗೇರ (13) ಮತ್ತು ಕೀರ್ತಿ ಬಡಿಗೇರ (9) ಎಂದು ಗುರುತಿಸಲಾಗಿದೆ.
ಗುರುನಾಥ್ ಅವರು ತಮ್ಮ ಸ್ವಂತ ಮನೆಯನ್ನು ದುರಸ್ತಿ ಮಾಡಿಸುತ್ತಿದ್ದ ಹಿನ್ನೆಲೆ ಕುಟುಂಬ ಸಮೇತ ಹಳೆಯ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದರು. ನಿನ್ನೆ ರಾತ್ರಿ ಸುರಿದ ಭಾರೀ ಮಳೆ ಹಾಗೂ ಗಾಳಿಯಿಂದ ಮನೆಯ ಹಳೆಯ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದಿದೆ. ಆ ವೇಳೆ ಮನೆಯೊಳಗೆ ಮಲಗಿದ್ದ ಕುಟುಂಬದ ನಾಲ್ವರು ಅವಶೇಷಗಳ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಿಂದಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವಶೇಷಗಳ ಅಡಿಯಲ್ಲಿದ್ದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಲಾಗಿದೆ.
ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದ್ದು, ಕುಟುಂಬಸ್ಥರ ಆಕ್ರಂದನ ಮನಕಲಕುವಂತಿದೆ. ಸ್ಥಳೀಯರು ಕೂಡ ದುರಂತ ಕಂಡು ಬೆಚ್ಚಿಬಿದ್ದಿದ್ದಾರೆ.





