ಬಾಂಗ್ಲಾದೇಶ ಕ್ರಿಕೆಟ್ ಆಟಗಾರ ಶಾಕಿಬ್ ಅಲ್ ಹಸನ್ ವಿರುದ್ಧ ಕೊಲೆ ಪ್ರಕರಣ ದಾಖಲು
ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಬಾಂಗ್ಲಾದ ಆಲ್ ರೌಂಡರ್ ಆಟಗಾರ ಶಕೀಬ್ ಅಲ್ ಹಸನ್ ಹೆಸರು ಕೇಳಿಬಂದಿದೆ. ರುಬೆಲ್ ಇಸ್ಲಾಂ ಹತ್ಯೆಯಲ್ಲಿ ಶಕೀಬ್ ಅಲ್ ಹಸನ್ (37) ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಶಕೀಬ್ ವಿರುದ್ಧ ದೂರು ದಾಖಲಾಗಿದೆ. ಅಲ್ಲದೇ ಇದಾದ ಬಳಿಕ ಪೊಲೀಸರು ಶಕೀಬ್ ವಿರುದ್ಧ ಎಫ್‌ಐಆರ್ ಸಹ ದಾಖಲಿಸಿದ್ದಾರೆ.
ಅಡಾಬೋರ್ನ ರಿಂಗ್ ರೋಡ್ ನಲ್ಲಿ ನಡೆದಿದ್ದ ರ್ಯಾಲಿಯೊಂದರಲ್ಲಿ ರುಬೆಲ್ ಭಾಗವಹಿಸಿದ್ದರು. ಅಲ್ಲಿ ಅವರ ಎದೆ ಹಾಗೂ ಹೊಟ್ಟೆಗೆ ಗುಂಡು ಹಾರಿಸಲಾಗಿತ್ತು ಎಂದು ವರದಿ ತಿಳಿಸಿದೆ. ಘಟನೆಯ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಆಗಸ್ಟ್ 7ರಂದು ಮೃತಪಟ್ಟಿದ್ದಾರೆ. ಢಾಕಾದ ಅಡಾಬೋರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಶಾಕೀಬ್ ರನ್ನು 28ನೇ ಆರೋಪಿ ಎಂದು ಹೆಸರಿಸಲಾಗಿದೆ. ಬಾಂಗ್ಲಾದೇಶದ ಜನಪ್ರಿಯ ನಟ ಫಿರ್ದೌಸ್ ಅಹ್ಮದ್ 55ನೇ ಆರೋಪಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಹೆಸರನ್ನೂ ಇತರ 154 ಜನರೊಂದಿಗೆ ಸೇರಿಸಲಾಗಿತ್ತು. ಸುಮಾರು 400-500 ಅಪರಿಚಿತ ವ್ಯಕ್ತಿಗಳು ಆರೋಪಿಗಳಾಗಿದ್ದಾರೆ ಎಂದು ವರದಿ ತಿಳಿಸಿದೆ.




