February 2, 2026

ವಿಟ್ಲ: ಮೆಸ್ಕಾಂ ಕಚೇರಿ ಸ್ಥಳಾಂತರದಿಂದ ಜನರಿಗೆ ಸಮಸ್ಯೆ: ಪುಣಚ ನಾಗರೀಕ ಹಿತರಕ್ಷಣಾ ವೇದಿಕೆ

0
IMG-20240820-WA0002.jpg

ವಿಟ್ಲ: ವಿಟ್ಲ ಮೆಸ್ಕಾಂ ಕಚೇರಿಯನ್ನು ಯಾವುದೇ ಕಾರಣಕ್ಕೆ ಸ್ಥಳಾಂತರ ಮಾಡಬಾರದು. ಚಂದಳಿಕೆ ಭಾಗದಲ್ಲಿ ಮೆಸ್ಕಾಂ ಕಛೇರಿಗೆ ಮೂಲಭೂತ ಸೌಕರ್ಯ ಕಡಿಮೆಯಿದ್ದು, ಜನಸಾಮಾನ್ಯರಿಗೆ ಓಡಾಟಕ್ಕೆ ಬಹಳಷ್ಟು ತೊಂದರೆಯಾಗುತ್ತದೆ. ಗ್ರಾಹಕರು ಬಾಡಿಗೆ ವಾಹನಕ್ಕೆ ಹೆಚ್ಚುವರಿಯಾಗಿ ಖರ್ಚು ಮಾಡಬೇಕಾಗುತ್ತದೆ ಎಂದು ಪುಣಚ ನಾಗರೀಕ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ವೆಂಕಟ್ರಮಣ ಪುಣಚ ಹೇಳಿದರು.

ವಿಟ್ಲದಲ್ಲಿ ಕರೆದ ಪತ್ರಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಟ್ಲ ಸರ್ಕಾರಿ ಬಸ್ ನಿಲ್ದಾಣದ ಬಳಿಯಿರುವ ಮೆಸ್ಕಾಂ ಕಛೇರಿಗೆ ೨೩ಸಾವಿರ ಬಾಡಿಗೆಯಿದ್ದು, ಸ್ಥಳಾಂತರವಾಗುವ ಕಟ್ಟಡಕ್ಕೆ ೩೮ ಸಾವಿರವಿದೆ. ಈಗಿನ ಆದೇಶದ ಪ್ರಕಾರ ೩೩ ತಿಂಗಳಿಗೆ ಹೆಚ್ಚುವರಿ ೧೫ ಸಾವಿರ ನೀಡುವ ಅವಶ್ಯಕತೆ ಇದೆಯಾ? ಇದರಲ್ಲಿ ಯಾರ ಲಾಭಿ ಇದೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದರು.

ರೈತ ಸಂಘದ ಗೌರವ ಸಲಹೆಗಾರ ಮುರುವ ಮಹಾಬಲ ಭಟ್ ಮಾತನಾಡಿ ಇಲಾಖೆ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ್ದರಿಂದ ಕಛೇರಿ ಈಗ ಇರುವಲ್ಲೇ ಉಳಿಯುವ ನಿರ್ಧಾರವನ್ನು ತೆಗೆದುಕೊಂಡಿದೆ. ಸ್ಥಳೀಯ ಶಾಸಕರು ಸ್ಥಳಾಂತರ ಕೈಬಿಡುವ ವಿಚಾರದಲ್ಲಿ ಪ್ರಯತ್ನ ಮಾಡಿದ್ದಾರೆ. ಮೆಸ್ಕಾಂಗೆ ಲಭ್ಯವಿರುವ ನಿವೇಶನದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನಗಳನ್ನು ಒದಗಿಸಬೇಕು. ಒಂದು ವರ್ಷದ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಕರಾವಳಿ ಜಲ ನೆಲ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಳಿಗೆ ಮಾತನಾಡಿ ಮೆಸ್ಕಾಂ ಕಛೇರಿಯನ್ನು ವರ್ಷಕ್ಕೊಂದು ಕಡೆಗೆ ಸ್ಥಳಾಂತರ ಮಾಡಿದರೆ, ರೈತರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗುತ್ತದೆ. ಈಗಾಗಲೇ ಮೆಸ್ಕಾಂನ ದಾಖಲೆಗಳು ಕಾಣೆಯುವ ಹಂತಕ್ಕೆ ತಲುಪಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕೆ.ಪಿ.ಟಿ.ಸಿ.ಎಲ್. ಉಪಕೇಂದ್ರದ ಸಮೀಪದಲ್ಲಿ ಖಾಸಗಿಯವರಿಂದ ಜಮೀನು ಪಡೆದುಕೊಂಡಿದ್ದು, ಅದರಲ್ಲಿ ಉಳಿಕೆಯಾದ ಸ್ಥಳದಲ್ಲಿ ಮೆಸ್ಕಾಂ ಕಚೇರಿ ಕಟ್ಟಡ ನಿರ್ಮಾಣ ಮಾಡಬೇಕು. ಸರ್ಕಾರಿ ಕಛೇರಿಗಳನ್ನು ಸಾರ್ವಜನಿಕರಿಗೆ ಓಡಾಟಕ್ಕೆ ಸಹಾಯವಾಗುವ ರೀತಿಯಲ್ಲಿ ಜನಪ್ರತಿನಿಧಿಗಳು ನಿರ್ಮಾಣ ಮಾಡಬೇಕೆಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!