21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಪಟ್ಟ:
ಹರ್ನಾಜ್ ಕೌರ್ ಸಂಧು ಗೆ 70ನೇ ‘ಮಿಸ್ ಯುನಿವರ್ಸ್’ ಕಿರೀಟ
ದೆಹಲಿ: 21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದಿದೆ. ಚಂಡೀಗಡ ಮೂಲದ 21ರ ಹರೆಯದ ಸುಂದರಿ ಹರ್ನಾಜ್ ಕೌರ್ ಸಂಧು, 70ನೇ ‘ಮಿಸ್ ಯುನಿವರ್ಸ್’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಈ ಹಿಂದೆ ಎರಡು ಬಾರಿ ಮಾತ್ರ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದಿತ್ತು. 2000ನೇ ಇಸವಿಯಲ್ಲಿ ಲಾರಾ ದತ್ತ ಮತ್ತು 1994ರಲ್ಲಿ ಸುಶ್ಮಿತಾ ಸೆನ್ ಪ್ರಶಸ್ತಿಯನ್ನು ಗೆದ್ದಿದ್ದರು.
70ನೇ ಮಿಸ್ ಯುನಿವರ್ಸ್ ಸ್ಪರ್ಧೆಯು ಇಸ್ರೇಲ್‌ನ ಇಲಾಟ್‌ನಲ್ಲಿ ಆಯೋಜನೆಯಾಗಿತ್ತು. ನಟಿ ಹಾಗೂ ರೂಪದರ್ಶಿ ಹರ್ನಾಜ್, ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.
ಪರಾಗ್ವೆಯ 22 ವರ್ಷದ ನಾಡಿಯಾ ಫೆರೆರಾ ಎರಡನೇ ಸ್ಥಾನ ಹಾಗೂ ದಕ್ಷಿಣ ಆಫ್ರಿಕಾದ 24 ವರ್ಷದ ಲಲೇಲಾ ಸ್ವಾನ್ ಮೂರನೇ ಸ್ಥಾನ ಪಡೆದರು.
‘ನನ್ನನ್ನು ಬೆಂಬಲಿಸಿದ್ದಕ್ಕಾಗಿ ದೇವರು, ಪೋಷಕರು ಹಾಗೂ ಮಿಸ್ ಇಂಡಿಯಾ ಸಂಸ್ಥೆಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಗೆಲುವಿಗಾಗಿ ಪ್ರಾರ್ಥಿಸಿದ ಹಾಗೂ ಹಾರೈಸಿದ ಪ್ರತಿಯೊಬ್ಬರಿಗೂ ಅಪಾರ ಪ್ರೀತಿಯನ್ನು ಸಲ್ಲಿಸುತ್ತಿದ್ದೇನೆ. 21 ವರ್ಷಗಳ ಬಳಿಕ ಭಾರತಕ್ಕೆ ಕಿರೀಟದ ವೈಭವ ಮರಳಿ ತರಲು ಸಾಧ್ಯವಾಗಿರುವುದು ಹೆಮ್ಮೆಯ ಕ್ಷಣ’ ಎಂದು ಹರ್ನಾಜ್ ಕೌರ್ ಸಂಧು ಪ್ರತಿಕ್ರಿಯಿಸಿದ್ದಾರೆ.





