ಶಿರಾಡಿ ಘಾಟಿ ಸಂಚಾರ ಬಂದ್ ಹಿನ್ನೆಲೆ: ರಸ್ತೆಯಲ್ಲೇ ಪಾರ್ಕಿಂಗ್ ಆದ ವಾಹನಗಳು
ಪುತ್ತೂರು: ಭೂಕುಸಿತ ಹಿನ್ನೆಲೆಯಲ್ಲಿ ಶಿರಾಡಿ ಘಾಟಿ ಸಂಚಾರವನ್ನು ರಾತ್ರಿ ಹೊತ್ತು ನಿರ್ಬಂಧಿಸಲಾಗಿದೆ. ಇದೀಗ ಶುಕ್ರವಾರ ಬೆಳಗ್ಗೆ ಗೇಟ್ ತೆರೆಯದ ಕಾರಣ ಬೆಂಗಳೂರು ಕಡೆ ತೆರಳುವ ನೂರಾರು ವಾಹನಗಳು ಶಿರಾಡಿ ತಪ್ಪಲಿನಲ್ಲಿ ಸರತಿಯಲ್ಲಿ ನಿಂತಿವೆ. ಹೆದ್ದಾರಿ ಸಂಚಾರವೇ ಬ್ಲಾಕ್ ಆಗಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಘಾಟ್ ಪ್ರದೇಶದ ಹಲವೆಡೆ ಗುಡ್ಡ ಕುಸಿತದ ಪ್ರಕರಣಗಳು ಉಂಟಾಗುತ್ತಿವೆ. ಮಾರ್ನಳ್ಳಿ ದೊಡ್ಡತಪ್ಪಲು ಪ್ರದೇಶದಲ್ಲಿ ಗುಡ್ಡ ಕುಸಿದು ಬುಧವಾರ ತಡರಾತ್ರಿ ಓಮಿನಿ ವಾಹನ ಮಣ್ಣಿನಡಿ ಸಿಲುಕಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ಮೂಲಕ ಪ್ರಯಾಣವನ್ನು ರಾತ್ರಿ ನಿಷೇಧ ಮಾಡಿ ಹಾಸನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಶುಕ್ರವಾರ ಬೆಳಗ್ಗೆಯೂ ಗುಂಡ್ಯದಲ್ಲಿ ಗೇಟ್ ತೆರೆಯದ ಕಾರಣ ಸಣ್ಣ ವಾಹನದಿಂದ ಹಿಡಿದು ಘನ ವಾಹನದವರೆಗೆ ರಸ್ತೆಯಲ್ಲಿ ಪಾರ್ಕ್ ಮಾಡಿದ ಕಾರಣ ಸ್ಥಳೀಯ ಸಾರ್ವಜನಿಕರಿಗೆ, ಧರ್ಮಸ್ಥಳದಿಂದ-ಸುಬ್ರಹ್ಮಣ್ಯಕ್ಕೆ ತೆರಳುವ ಯಾತ್ರಾತ್ರಿಗಳಿಗೆ, ಉದ್ಯೋಗಕ್ಕೆ ತೆರಳುವವರಿಗೆ ಸಮಸ್ಯೆಯಾಗಿದೆ.




