ಮಡಿಕೇರಿ: ವಾಹನ ಕಳವು ಆರೋಪಿಯ ಸೆರೆ, ಕಾರು ಸಹಿತ 11 ದ್ವಿಚಕ್ರ ವಾಹನಗಳ ವಶಕ್ಕೆ
ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಬಂಧಿಯಾಗಿರುವ ಆರೋಪಿಯೊಬ್ಬ ಅಂತರ್ ಜಿಲ್ಲಾ ವಾಹನ ಚೋರನೂ ಆಗಿದ್ದಾನೆ ಎನ್ನುವ ಮಾಹಿತಿ ವಿಚಾರಣೆ ವೇಳೆ ಬಹಿರಂಗಗೊಂಡಿದೆ.
ಅರ್ಜಿ ಗ್ರಾ.ಪಂ ವ್ಯಾಪ್ತಿಯ ಒಂದನೇ ಪೆರುಂಬಾಡಿ ಗ್ರಾಮದ ನಿವಾಸಿ, ಕೂಲಿ ಕಾರ್ಮಿಕ ಎನ್.ದರ್ಶನ್ ನಾಯಕ್ (26) ಬಂಧಿತ ಆರೋಪಿಯಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 11 ದ್ವಿಚಕ್ರ ವಾಹನಗಳು ಮತ್ತು ಒಂದು ಓಮ್ನಿ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹುಣಸೂರು, ಹನಗೋಡು, ಬಿಳಿಕೆರೆ, ರಾಮನಾಥಪುರ ಮತ್ತಿತರ ಕಡೆಗಳಲ್ಲಿ ಈತ ವಾಹನಗಳನ್ನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.




