ಕಳ್ಳಬಟ್ಟಿ ಪ್ಯಾಕೆಟ್ ಸಾರಾಯಿ ಸೇವಿಸಿ 34 ಮಂದಿ ಸಾವು, 70ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಚೆನ್ನೈ: ಕಳ್ಳಬಟ್ಟಿ ಪ್ಯಾಕೆಟ್ ಸಾರಾಯಿ ಸೇವಿಸಿ 34ಮಂದಿ ಸಾವನ್ನಪ್ಪಿ, 70ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದಿದೆ.
ಮೃತರಲ್ಲಿ ಮಹಿಳೆಯರೂ ಸೇರಿದ್ದಾರೆ. ದುರಂತ ವರದಿಯಾದ ನಂತರ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಈ ಪ್ರಕರಣದ ಬಗ್ಗೆ ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.
ಕಲ್ಲಕುರಿಚಿ ಜಿಲ್ಲೆಯ ಕರುಣಾಪುರಂ ಎಂಬಲ್ಲಿ ಕಳ್ಳಬಟ್ಟಿಯನ್ನು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕೂಲಿ ಕಾರ್ಮಿಕರೇ ಇದನ್ನು ಹೆಚ್ಚಾಗಿ ಸೇವಿಸುತ್ತಾರೆ.
ಜೂ.18ರಂದು ರಾತ್ರಿ ಕಳ್ಳಬಟ್ಟಿ ಸೇವಿಸಿದವರರು ತೀವ್ರ ಅಸ್ವಸ್ಥಗೊಂಡಿದ್ದು, ಕೆಲವು ಮಂದಿ ರಾತ್ರಿಯೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾದವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಹಲವು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳಬಟ್ಟಿ ಮಾರಿದ ಗೊಂವಿಂದರಾಜ ಅಲಿಯಾಸ್ ಕನ್ನುಕುಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿ ಮೆಥೆನಾಲ್ ಮಿಶ್ರಣ ಹೊಂದಿದ್ದ 200 ಲೀಟರ್ ಕಳ್ಳಬಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.