ಕಾರ್ಕಳ: 6,500 ರೂ. ಮೌಲ್ಯದ ಮೀನನ್ನು ಕೇವಲ 140 ರೂ.ಗೆ ಮಾರಿದ ಕಳ್ಳ
ಕಾರ್ಕಳ : ಮೀನು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಮೀನೊಂದನ್ನು ಕದ್ದು ಮಾರಾಟ ಮಾಡಿರುವ ಅಪರೂಪದ ಘಟನೆಯೊಂದು ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ಮಾರುಕಟ್ಟೆಯಲ್ಲಿ ಜೂ. 9ರಂದು ಮೀನಿನ ವ್ಯಾಪಾರಿ ಮಾಲ ಎಂಬವರು ಗ್ರಾಹಕರೋರ್ವರ ಬೇಡಿಕೆಯಂತೆ 6,500 ರೂ. ಮೌಲ್ಯದ ಅಂಜಲ್ ಮೀನನ್ನು ಖರೀದಿಸಿ ಫ್ರಿಜ್‌ನಲ್ಲಿಟ್ಟಿದ್ದರು.
ಮರುದಿನ ಮೀನು ಪಡೆಯಲು ಗ್ರಾಹಕ ಮಾಲ ಅವರಲ್ಲಿ ಬಂದಾಗ ಫ್ರಿಜ್‌ನಲ್ಲಿಟ್ಟಿದ್ದ ಮೀನು ಕಾಣೆಯಾಗಿತ್ತು. ಯಾರೋ ಕಳ್ಳರು ಫ್ರಿಜ್‌ನಿಂದ ಮೀನು ಕದ್ದಿರುವ ವಿಚಾರ ತಿಳಿದ ಮಾಲ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್ ಎಂಬಾತನನ್ನು ಪೊಲೀಸರು ವಿಚಾರಿಸಿದಾಗ ಮದ್ಯಕ್ಕಾಗಿ ಮೀನನ್ನು ಕದ್ದು 140 ರೂ.ಗೆ ಹೂವಿನ ವ್ಯಾಪಾರಿಯೋರ್ವರಿಗೆ ಮಾರಿರುವುದಾಗಿ ತಪ್ರೊಪ್ಪಿಕೊಂಡಿದ್ದಾನೆ.
ಹೂವಿನ ವ್ಯಾಪಾರಿಯನ್ನು ಠಾಣೆಗೆ ಕರೆಯಿಸಿ ವಿಚಾರಿಸಿದಾಗ ನಿಜಾಂಶ ಬಯಲಾಗಿದೆ. ಬಳಿಕ ಠಾಣೆಯಲ್ಲಿ ಮಾತುಕತೆಯಾಗಿದ್ದು ಮೀನು ವ್ಯಾಪಾರಿಗೆ ಹೂವಿನ ವ್ಯಾಪಾರಿ ಮೀನಿನ ಮೌಲ್ಯ ನೀಡಲು ಒಪ್ಪಿದ್ದಾರೆ.
ಈಗಾಗಲೇ 3 ಸಾವಿರ ರೂ. ಹಣ ನೀಡಿದ್ದು, ಉಳಿದ ಹಣವನ್ನು ಜೂ. 27ರಂದು ಕೊಡುವುದಾಗಿ ಹೇಳಿದ್ದಾರೆ. ಬಳಿಕ ಠಾಣೆಯಲ್ಲಿ ಮುಚ್ಚಳಿಕೆ ಬರೆಯಿಸಿ ಪ್ರಕರಣ ಇತ್ಯರ್ಥಗೊಳಿಸಲಾಗಿದೆ.