ಲೈಂಗಿಕ ದೌರ್ಜನ್ಯ ಪ್ರಕರಣ: ದೂರು ಕೊಟ್ಟವರು ಯಾರೆಂದು ಪ್ರಶ್ನಿಸಿದ ಪ್ರಜ್ವಲ್ ರೇವಣ್ಣ?
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಿಟ್ ವಶದಲ್ಲಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆ ವೇಳೆ ಅಧಿಕಾರಿಗಳನ್ನೆ ಮರು ಪ್ರಶ್ನೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಟ್ ಅಧಿಕಾರಿಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಪ್ರಜ್ವಲ್ ರೇವಣ್ಣ ಸಮರ್ಪಕ ಉತ್ತರ ಬದಲಾಗಿ, ದೂರು ಕೊಟ್ಟವರು ಯಾರು, ತಾವು ಹೇಳುತ್ತಿರುವ ಮಹಿಳೆಯರ ಕುರಿತು ಮಾಹಿತಿಯೇ ಇಲ್ಲ ಎಂದು ಹೇಳಿಕೆ ನೀಡಿರುವುದಾಗಿ ಹೇಳಲಾಗುತ್ತಿದೆ.
ಇನ್ನೂ, ನಿಮ್ಮ ತಾಯಿ ಇಲ್ಲದ ಸಂದರ್ಭದಲ್ಲಿ ಹೊಳೆನರಸೀಪುರದಲ್ಲಿರುವ ಮನೆಗೆ ಏಕೆ ಹೋಗುತ್ತಿದ್ದಿರಿ? ಮನೆಯಲ್ಲಿ ಕೆಲಸಗಾರರು ಎಷ್ಟು ಮಂದಿ ಇದ್ದಾರೆ? ಅವರನ್ನು ಯಾವ ರೀತಿ ನೋಡುತ್ತಿದ್ದಿರಿ? ಎಂದು ಹಲವು ಪ್ರಶ್ನೆಗಳನ್ನು ಪ್ರಜ್ವಲ್ ರೇವಣ್ಣ ಅವರಿಗೆ ಸಿಟ್ ತನಿಖಾಧಿಕಾರಿಗಳು ಕೇಳಿದ್ದಾರೆ.
ಅಲ್ಲದೆ, ಹೊಳೆನರಸೀಪುರ, ಹಾಸನ ತೋಟದ ಮನೆಗಳಲ್ಲಿ ತುಂಬಾ ಜನ ಕೆಲಸದವರಿದ್ದಾರೆ. ಯಾರೆಂಬುದು ಗೊತ್ತಿಲ್ಲ. ಯಾರು ಎಂಬುದು ನೆನಪಿಲ್ಲ ಎಂದೂ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಅದು ಅಲ್ಲದೆ, ನಾನು ಯಾರ ಮೇಲೂ ಲೈಂಗಿದ ದೌರ್ಜನ್ಯವೆಸಗಿಲ್ಲ. ಪೆನ್‍ಡ್ರೈವ್ ಪ್ರಕರಣಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ, ವಿನಾಕಾರಣ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ಜತೆಗೆ, ಈಗಾಗಲೇ ಹಲವು ಪ್ರಶ್ನೆಗಳಿಗೆ ವಕೀಲರನ್ನು ಕೇಳಿ ಉತ್ತರಿಸುವುದಾಗಿ ಪ್ರಜ್ವಲ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.




