KRIDLನಿಂದ ಬಿಲ್ ಬಾಕಿ: ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

ಬೆಂಗಳೂರು: ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸರಕಾರ ಚೇತರಿಸಿಕೊಳ್ಳುವ ಮೊದಲೇ ಇನ್ನೊಂದು ಆತ್ಮಹತ್ಯೆ ಸಂಭವಿಸಿದೆ.
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (KRIDL)ನಿಂದ 2023-24ನೇ ಸಾಲಿನ ಬಾಕಿ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಮನನೊಂದ ಸಂತೇಬೆನ್ನೂರಿನ ಗುತ್ತಿಗೆದಾರ ಪಿ.ಎಸ್ ಗೌಡರ್ (48) ಡೆತ್ ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಿ.ಎಸ್ ಗೌಡರ್ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನವರು. ಸಂತೇಬೆನ್ನೂರಿನ ಕೃಷಿ ಇಲಾಖೆ ಆವರಣದಲ್ಲಿ 2023-24ರಲ್ಲಿ ನಡೆದ ಕಾಮಗಾರಿಗೆ ಸಂಬಂಧಿಸಿದ ಹಣ ಬಿಡುಗಡೆ ಮಾಡದೆ ಕೆಆರ್‌ಡಿಎಲ್ ಅಧಿಕಾರಿಗಳು ಸತಾಯಿಸುತ್ತಿದ್ದರು.
ಅಲ್ಲದೆ ಇವರ ಇಬ್ಬರು ಸಹೋದರರು ಹಣಕಾಸು ವಿಚಾರವಾಗಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳ ಧೋರಣೆ ಮತ್ತು ಸಹೋದರರ ವರ್ತನೆಯಿಂದ ಬೇಸತ್ತು ಮನೆಯಲ್ಲಿ ಮೇ 26ರಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಆರ್‌ಐಡಿಎಲ್ ದೊಡ್ಡ ಮೊತ್ತದ ಪರಿಹಾರ ನೀಡಬೇಕೆಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.