ಕೆಸರುಮಯವಾದ ಶಾಂತಿಅಂಗಡಿ-ಕೊಮೋರು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ವಾರ್ಡ್ ನಂ 19 ರ ಶಾಂತಿಅಂಗಡಿ, ಕೊಮೋರು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ದಾಂಬಾರು ಕಾಣದೆ, ಗುಂಡಿಗಳಿಂದ ತುಂಬಿಕೊಂಡು ಹಲವಾರು ವರ್ಷಗಳಿಂದ ನಿರ್ಲಕ್ಷಕ್ಕೊಳಗಾಗಿದೆ ಎಂದು ನಿವಾಸಿಗಳು ಆರೋಪಿದ್ದಾರೆ.
ಮಳೆಗಾಲ ಬಂತೆಂದರೆ ಈ ಭಾಗದ ಜನರ ನೋವು ಅಷ್ಟಿಷ್ಟಲ್ಲಾ, ಅತ್ತ ರಸ್ತೆಯ ಗುಂಡಿಗಳಲ್ಲಿ ಕೆಸರು ತುಂಬಿಕೊಂಡು, ಇತ್ತ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ಸಂಪೂರ್ಣವಾಗಿ ರಸ್ತೆಯಲ್ಲೇ ಹರಿಯುವುದರಿಂದ ರಸ್ತೆಯಲ್ಲಿ ನಡೆದಾಡಲೂ ಕೂಡಾ ಸಾಧ್ಯವಿಲ್ಲದಂತಹಾ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ನೂರಾರು ಮನೆಗಳಿದ್ದು ದಿನನಿತ್ಯ ಇದೇ ರಸ್ತೆಯಲ್ಲಿ ವಿಧ್ಯಾರ್ಥಿಗಳು, ನಾಗರಿಕರು ಕೆಸರಿನಲ್ಲಿಯೇ ಸಂಚರಿಸಬೇಕಾದ ಪರಿಸ್ಥಿತಿಯಿದೆ.ಇದರ ಪಕ್ಕದಲ್ಲಿಯೇ ಖಬರ್ ಸ್ಥಾನವಿದ್ದು ಈ ಕೆಸರಿನಲ್ಲಿಯೇ ಮಯ್ಯತ್ತ್ ಕೊಂಡೊಯ್ಯಬೇಕಾದ ಧಾರುಣ ಸ್ಥಿತಿ ಈ ಭಾಗದ ಜನರ ಸಂಕಷ್ಟವನ್ನು ಇಮ್ಮಡಿಗೊಳಿಸಿದೆ. ಕಳೆದ ಕೆಲದಿನಗಳ ಹಿಂದೆ ಒಂದು ವ್ಯಕ್ತಿಯೊರ್ವರ ಮಯ್ಯತ್ತನ್ನು ಇದೇ ಕೆಸರುಮಯ ರಸ್ತೆಯಲ್ಲಿ ಹೊತ್ತುಕೊಂಡು ಕೊಂಡೊಯ್ಯುವ ವೇಳೆ ಮಯ್ಯತ್ತಿಗೆ ಹೆಗಲು ಕೊಟ್ಟಿದ್ದವರಲ್ಲಿ ಒಬ್ಬರು ಜಾರಿಬಿದ್ದಿರುವ ಘಟನೆಯೂ ನಡೆದಿದೆ.
ಇಲ್ಲಿನ ರಸ್ತೆಯ ಶೋಚನೀಯ ಪರಿಸ್ಥಿತಿಯ ಕುರಿತು ಹಾಗೂ ರಸ್ತೆಗೆ ಕಾಂಕ್ರೇಟೀಕರಣ ನಡೆಸುವಂತೆ ಇಲ್ಲಿ ಕಳೆದ 20 ವರ್ಷಗಳಿಂದ ಸತತ ಈ ವಾರ್ಡ್ ನ ಸದಸ್ಯರಾಗಿರುವ ಪುರಸಭಾ ಸದಸ್ಯರಿಗೆ ಈ ಭಾಗದ ನಾಗರಿಕರು ಹಲವಾರು ಭಾರಿ ಮನವಿ ಸಲ್ಲಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲಾ, ಇಲ್ಲಿನ ವಾರ್ಡ್ ಸದಸ್ಯರು ಕಳೆದ ಅವಧಿಗೆ ಪುರಸಭೆಯ ಅಧ್ಯಕ್ಷರಾಗಿದ್ದ ಸಂಧರ್ಭದಲ್ಲೂ ಇಲ್ಲಿನ ನಾಗರಿಕರು ರಸ್ತೆಯ ಕುರಿತಂತೆ ಮನವಿ ಸಲ್ಲಿಸಿದಾಗ ‘ತಾನು ಅಧ್ಯಕ್ಷನಾಗಿದ್ದು ಈ ಭಾರಿ ಖಂಡಿತವಾಗಿಯೂ ರಸ್ತೆಗೆ ಕಾಂಕ್ರೇಟೀಕರಣ ನಡೆಸುವೆ’ನೆಂದು ಭರವಸೆ ನೀಡಿದ್ದರು.
ಆದರೂ ಭರವಸೆ ಇಂದಿಗೂ ಈಡೇರಿಲ್ಲಾ, ಮದ್ರಸಕ್ಕೆ ತೆರಳುವ ಸಣ್ಣ ಮಕ್ಕಳು, ವಿಧ್ಯಾರ್ಥಿಗಳು ಇದೇ ಕೆಸರಲ್ಲಿ ಸಂಚರಿಸಬೇಕಾದ ಪರಿಸ್ಥಿತಿಯಿದೆ ಅಲ್ಲದೆ ಆಟೋ ರಿಕ್ಷಾದವರೂ ಇಲ್ಲಿಗೆ ಕರೆದರೆ ಬರಲು ನಿರಾಕರಿಸುತ್ತಿದ್ದಾರೆ, ಆದ್ದರಿಂದ ಕೊಮೋರು ಪರಿಸರದ ನಾಗರಿಕರ ಶೋಚನೀಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸಂಭಂಧಪಟ್ಟವರು ಈ ಕೂಡಲೇ ರಸ್ತೆಗೆ ಕಾಯಕಲ್ಪ ನೀಡಬೇಕಿದೆ ಎಂದು ಕೊಮೋರ್ ನಿವಾಸಿಗಳು ಆಗ್ರಹಿಸಿದ್ದಾರೆ.