ಬೆಳ್ತಂಗಡಿ: ಕಟ್ಟಿಗೆ ತರಲೆಂದು ಮನೆ ಸಮೀಪದ ಕಾಡಿಗೆ ತೆರಳಿ ನಾಪತ್ತೆಯಾಗಿದ್ದ ವೃದ್ಧ ಪತ್ತೆ

ಬೆಳ್ತಂಗಡಿ: ಕಳೆದ ಮಂಗಳವಾರ ಕಟ್ಟಿಗೆ ತರಲೆಂದು ಮನೆ ಸಮೀಪದ ಗುಡ್ಡೆಗೆ ಹೋಗಿದ್ದ ಶಿಬಾಜೆ ಗ್ರಾಮದ ಐoಗುಡ ನಿವಾಸಿ ವಾಸು ರಾಣ್ಯ(83) ರವಿವಾರ ಪತ್ತೆಯಾಗಿದ್ದು, ಆರು ದಿನಗಳ ಬಳಿಕ ತಮ್ಮ ಮನೆ ಸೇರಿಕೊಂಡಿದ್ದಾರೆ.
ಶಿಬಾಜೆ ಗ್ರಾಮದ ವಾಸು ರಾಣ್ಯ ಎಂಬವರು ಮೇ 21ರ ಬೆಳಗ್ಗೆ ಕೈಯಲ್ಲೊಂದು ಕತ್ತಿ ಹಿಡಿದು, ಮನೆ ಸಮೀಪವಿರುವ ಗುಡ್ಡಕ್ಕೆ ತೆರಳಿದ್ದರು. ಕಟ್ಟಿಗೆ ತರಲು ಹೋಗಿರಬಹುದು ಎಂದು ಮನೆಯವರು ಸುಮ್ಮನಿದ್ದರು. ಮಧ್ಯಾಹ್ನದವರೆಗೂ ವಾಸು ರಾಣ್ಯ ಮನೆಗೆ ಬರದೇ ಇದ್ದಾಗ, ಸ್ಥಳೀಯರ ಜತೆ ಹುಡುಕಾಟ ನಡೆಸಿದರು. ಸುಮಾರು ಐದು ದಿನಗಳ ಕಾಲ ಸುತ್ತಮುತ್ತ ಹುಡುಕಿದರೂ ವಾಸು ರಾಣ್ಯ ಪತ್ತೆಯಾಗಿರಲಿಲ್ಲ.
ರವಿವಾರ ಬೆಳಗ್ಗೆ ಮನೆಯವರು ಆಡು ಮೇಯಿಸಲೆಂದು ಮನೆ ಸಮೀಪವಿರುವ ಗುಡ್ಡೆಗೆ ತೆರಳಿದಾಗ ಕೂ…ಕೂ…ಎಂಬ ಶಬ್ದ ಕೇಳಿ ಬಂತು. ಸದ್ದಿನ ಜಾಡು ಹಿಡಿದು ಸ್ಥಳೀಯರು ಮತ್ತು ಶೌರ್ಯ ವಿಪತ್ತು ತಂಡದವರು ಹುಡುಕಾಟ ನಡೆಸಿದಾಗ ಮನೆಯ ಮೇಲಿನ ಭಾಗದ ಭಂಡಿಹೊಳೆ ಕಾಡಿನ ಸುಮಾರು 2.5 ಕಿ. ಮೀ. ದೂರದಲ್ಲಿ ವಾಸು ರಾಣ್ಯ ಪತ್ತೆಯಾಗಿದ್ದಾರೆ.