ಆರೆಸ್ಸೆಸ್ ಗೆ ಸೇರಿದ ಕಡತಗಳನ್ನು ತೆರವುಗೊಳಿಸುವುದಕ್ಕಾಗಿ 300 ಕೋಟಿ ರೂ. ಆಮಿಷ: ಸತ್ಯಪಾಲ್ ಮಲಿಕ್
ನವದೆಹಲಿ: ತಾವು ಅಧಿಕಾರದಲ್ಲಿದ್ದ ವೇಳೆ ಅಂಬಾನಿ ಗ್ರೂಪ್ಸ್ ಮತ್ತು ಆರ್‌ಎಸ್‌ಎಸ್ ಸಂಬಂಧಿತ ವ್ಯಕ್ತಿಗೆ ಸೇರಿದ ಕಡತಗಳನ್ನು ತೆರವುಗೊಳಿಸುವುದಕ್ಕಾಗಿ ತಮಗೆ ₹ 300 ಕೋಟಿ ಆಮಿಷ ಒಡ್ಡಲಾಗಿತ್ತು. ಆದರೆ ಅವುಗಳನ್ನು ತಿರಸ್ಕರಿಸಿದ್ದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ಸದ್ಯ ಮೇಘಾಲಯದ ರಾಜ್ಯಪಾಲರಾಗಿರುವ ಮಲಿಕ್, ರಾಜಸ್ಥಾನದ ಝುಂಝುನುವಿನಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ್ದಾರೆ.
ʼನಾನು ಕಾಶ್ಮೀರಕ್ಕೆ ತೆರಳಿದಾಗ ಎರಡು ಕಡತಗಳು (ವಿಲೇವಾರಿಗಾಗಿ) ನನ್ನ ಬಳಿಗೆ ಬಂದಿದ್ದವು. ಒಂದು ಅಂಬಾನಿ ಅವರಿಗೆ ಸಂಬಂಧಿಸಿದ್ದು. ಇನ್ನೊಂದು ಕಡತ ಮೆಹಬೂಬಾ ಮುಫ್ತಿ ನೇತೃತ್ವದ (ಪಿಡಿಪಿ-ಬಿಜೆಪಿ ಸಮ್ಮಿಶ್ರ) ಸರ್ಕಾರದಲ್ಲಿ ಸಚಿವರಾಗಿದ್ದ, ಆರ್‌ಎಸ್‌ಎಸ್ ಸಂಪರ್ಕದಲ್ಲಿದ್ದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಪ್ತರಾಗಿದ್ದ ವ್ಯಕ್ತಿಗೆ ಸಂಬಂಧಿಸಿದ್ದು. ಈ ಕಡತಗಳ ವ್ಯವಹಾರದಲ್ಲಿ ಹಗರಣವಿದೆ ಎಂಬುದನ್ನು ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳು ತಿಳಿಸಿದ್ದರು.
ಅದರಂತೆ ಆ ವ್ಯವಹಾರಗಳನ್ನು ರದ್ದುಪಡಿಸಿದ್ದೆ. ಪ್ರತಿ ಕಡತ ವಿಲೇವಾರಿಗೆ ನನಗೆ ತಲಾ ₹ 150 ಕೋಟಿ ಸಿಗಲಿದೆ ಎಂದು ಕಾರ್ಯದರ್ಶಿಗಳು ಹೇಳಿದ್ದರು. ಆದರೆ, ನಾನು ಐದು ಕುರ್ತಾ-ಪೈಜಾಮಾಗಳೊಂದಿಗೆ ಇಲ್ಲಿಗೆ ಬಂದಿದ್ದೇನೆ. ಇಲ್ಲಿಂದ ಹೋಗುವಾಗಲೂ ಅವುಗಳೊಂದಿಗೇ ಹೋಗುತ್ತೇನೆ ಎಂದು ಅವರಿಗೆ ಹೇಳಿದ್ದೆʼ ಎಂದಿದ್ದಾರೆ.





