ಮುಂಬೈ: ಕಟ್ಟಡದಲ್ಲಿ ಬೆಂಕಿ ಅವಘಡ:
ಓರ್ವ ಮೃತ್ಯು, ಹಲವರು ಸಿಲುಕಿರುವ ಶಂಕೆ
ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿ ಪ್ರಮಾದದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಸಿಲುಕಿರುವ ಶಂಕೆ ಎದುರಾಗಿದೆ.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೆಂಟ್ರಲ್ ಮುಂಬೈನ ಮಾಧವ್ ಪಾಲವ್ ಮಾರ್ಗದಲ್ಲಿರುವಕರಿ ರಸ್ತೆಯ ಅವಿಘ್ನ ಪಾರ್ಕ್ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಬೈ ಅಗ್ನಿಶಾಮಕ ದಳ ತಿಳಿಸಿದೆ.
ಸುಮಾರು 61 ಅಂತಸ್ತಿನ ಈ ವಸತಿ ಕಟ್ಟಡದ 19ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವಿಚಾರ ತಿಳಿಯುತ್ತಲೇ 8ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.
ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 30 ವರ್ಷದ ಸ್ಥಳೀಯ ನಿವಾಸಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಬಾಲ್ಕನಿಯಿಂದ ಕೆಳಗೆ ಇಳಿಯಲು ಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ಅವರು ಕೆಳಗೆ ಬಿದ್ದಿದ್ದು, ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ತಿಳಿದುಬಂದಿದೆ.
ಇನ್ನು ವಸತಿ ಕಟ್ಟಡವಾದ್ದರಿಂದ ಸಾಕಷ್ಟು ಕುಟುಂಬಗಳು ಇಲ್ಲಿ ವಾಸವಾಗಿದ್ದವು. ಹೀಗಾಗಿ ಕಟ್ಟಡದಲ್ಲಿ ಹಲವರು ಸಿಲುಕಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





