ಮಲಯಾಳಂ ಚಲನಚಿತ್ರ ನಿರ್ಮಾಪಕನ ಮನೆಯಲ್ಲಿ ಕಳ್ಳತನ: 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸಹಿತ ಆರೋಪಿಯ ಬಂಧನ
ಉಡುಪಿ : ಕೇರಳದ ಚಿತ್ರ ನಿರ್ಮಾಪಕರೊಬ್ಬರ ಮನೆಯಿಂದ ಒಂದು ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಆರೋಪಿ ಉಡುಪಿ ಕುಂದಾಪುರದಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.
ಬಿಹಾರಕ್ಕೆ ಚಿನ್ನ ಸಾಗಿಸುತ್ತಿದ್ದ ಈ ಅಂತರ್ ರಾಜ್ಯ ಕಳವು ಆರೋಪಿಯೋರ್ವನನ್ನು ಕೋಟ ಪೊಲೀಸರು ಕ್ಷಿಪ್ರ ಕಾರ್ಯಚರಣೆಯಲ್ಲಿ ಬಂಧಿಸಿದ್ದಾರೆ.
ಬಿಹಾರ ರಾಜ್ಯದ ಸೀತಾಮರಿ ಜಿಲ್ಲೆಯ ನಿವಾಸಿ ಮುಹಮ್ಮದ್ ಇರ್ಫಾನ್ (35) ಬಂಧಿತ ಆರೋಪಿ. ಖಚಿತ ಮಾಹಿತಿಯನ್ನು ಆಧರಿಸಿ ಕೋಟ ಪೊಲೀಸರು ಮೂರ್ಕೈ ಸಮೀಪ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಲಯಾಳಂ ಚಲನಚಿತ್ರ ನಿರ್ಮಾಪಕ ಜೋಶಿಯವರ ಕೊಚ್ಚಿ ಪನಂಪಲ್ಲಿಯ ಮನೆಯಿಂದ ಎ.20ರಂದು ಮುಂಜಾನೆ ಕಳ್ಳತನ ನಡೆದಿತ್ತು.
ಮನೆಯ ಅಡುಗೆ ಕೋಣೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳ ಕಪಾಟನ್ನು ಒಡೆದು 10 ವಜ್ರದ ಉಂಗುರ, 12 ವಜ್ರದ ಕಿವಿಯೋಲೆ, 2 ಚಿನ್ನದ ಉಂಗುರ, 10 ಚಿನ್ನದ ನೆಕ್ಲೆಸ್, 10 ಚಿನ್ನದ ಬಳೆ, 10 ಕೈಗಡಿಯಾರ ಸಹಿತ 1 ಕೋಟಿ ರೂ. ಮೌಲ್ಯದ 1.2 ಕೆಜಿ ಆಭರಣಗಳನ್ನು ಕಳವುಗೈದು ಪರಾರಿಯಾಗಿದ್ದ.
ಈ ನಡುವೆ ಅಪಾರ ಪ್ರಮಾಣದ ಚಿನ್ನಾಭರಣವನ್ನು ಕೇರಳದಿಂದ ಕರ್ನಾಟಕವಾಗಿ ಬಿಹಾರಕ್ಕೆ ಅಕ್ರಮವಾಗಿ ಸಾಗಟ ಮಾಡುತ್ತಿರುವ ಬಗ್ಗೆ ಕೋಟ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು.





