ಹಾವುಗಳ ಕಾಟದಿಂದ ಮುಕ್ತಿ ಪಡೆಯಲು 13.50 ಕೋಟಿ ರೂ. ಮೌಲ್ಯದ ಮನೆಗೆ ಬೆಂಕಿಕೊಟ್ಟ ಮಾಲಕ
ಮೇರಿಲ್ಯಾಂಡ್: ದಿನಂಪ್ರತಿ ಮನೆಗೆ ನುಗ್ಗುತ್ತಿದ್ದ ಸರ್ಪಗಳಿಂದ ಮುಕ್ತಿ ಪಡೆಯಲೆಂದು ಮನೆ ಮಾಲೀಕ ಬರೋಬ್ಬರಿ 13.50 ಕೋಟಿ ರೂ. ಪಾವತಿಸಿ ಇತ್ತೀಚೆಗಷ್ಟೇ ಖರೀದಿಸಿದ್ದ ಮನೆಯನ್ನೇ ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಡೆದಿದೆ.
ಹಾಗಂತ ಇದನ್ನು ಆತ ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಈ ವ್ಯಕ್ತಿ ಆ ಮನೆಯನ್ನು ಖರೀದಿಸುವ ಮುನ್ನ ಆ ಮನೆಯಲ್ಲಿ ಬಾಡಿಗೆಗಿದ್ದವರು ಕೂಡ ಹಾವುಗಳ ಕಾಟದಿಂದ ರೋಸಿ ಹೋಗಿರುವುದಾಗಿ ತಿಳಿದುಬಂದಿದೆ.
ಏನೂ ಆಗಲಿಕ್ಕಿಲ್ಲ ಎಂದು ಭಾವಿಸಿ ಇವರು ಮನೆಯನ್ನು ಕೊಂಡುಕೊಂಡಿದ್ದರು. ಆದರೆ, ಮನೆಗೆ ಬಂದಿದ್ದೇ ತಡ, ಹಾವುಗಳು ದಿನನಿತ್ಯ “ಅತಿಥಿ’ಗಳಂತೆ ಮನೆಗೆ ಆಗಮಿಸುತ್ತಿದ್ದವು. ಕಣ್ಣು ಹಾಯಿಸಿದಲ್ಲೆಲ್ಲ ಹಾವುಗಳನ್ನು ಕಂಡರೆ ಯಾರಿಗಾದರೂ ಹೇಗಾಗಿರಬೇಡ? ಇದರಿಂದ ಕಂಗಾಲಾದ ಮಾಲೀಕ, ಭಾನುವಾರ ಒಂದಿಷ್ಟು ಕಲ್ಲಿದ್ದಲನ್ನು ತಂದು ಅದಕ್ಕೆ ಬೆಂಕಿ ಕೊಟ್ಟಿದ್ದಾನೆ.
ಕಲ್ಲಿದಲ್ಲಿನಿಂದ ಏಳುವ ಹೊಗೆ ತಾಳಲಾರದೇ ಸರ್ಪಗಳು ಓಡಿಹೋಗಬಹುದು ಎನ್ನುವುದು ಅವನ ಲೆಕ್ಕಾಚಾರವಾಗಿತ್ತು. ಆದರೆ, ಬೆಂಕಿಯು ಕ್ಷಣಮಾತ್ರದಲ್ಲಿ ಅಲ್ಲಿದ್ದ ದಹ್ಯ ವಸ್ತುಗಳಿಗೆ ವ್ಯಾಪಿಸಿ, 10 ಸಾವಿರ ಚದರ ಅಡಿ ವಿಸ್ತೀರ್ಣದ ಇಡೀ ಬಂಗಲೆಯನ್ನೇ ಸುಟ್ಟು ಕರಕಲಾಗಿಸಿದೆ.





