ವಿಠ್ಠಲ ಮಲೆಕುಡಿಯ ಪ್ರಕರಣದ ತೀರ್ಪು ಐತಿಹಾಸಿಕವಾದುದು:
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹರ್ಷ

ಬೆಳ್ತಂಗಡಿ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾಗಿದ್ದ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ವಿಠ್ಠಲ ಮಲೆಕುಡಿಯ ಅವರ ಮೇಲಿನ ದೇಶದ್ರೋಹದ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ನೀಡಿರುವ ದೋಷಮುಕ್ತ ತೀರ್ಪು ಐತಿಹಾಸಿಕವಾದುದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಬೆಳ್ತಂಗಡಿ ತಾಲೂಕು ಸಮಿತಿ ಸಂತಸ ವ್ಯಕ್ತಪಡಿಸಿದೆ.
2012 ರ ಮಾರ್ಚ್ 3 ರಂದು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದ ವಿಠ್ಠಲ ಮಲೆಕುಡಿಯ ಹಾಗೂ ಆತ ತಂದೆ ನಿಂಗಣ್ಣ ಮಲೆಕುಡಿಯ ಅವರ ಮೇಲೆ ಅಂದಿನ ಬಿಜೆಪಿ ಸರ್ಕಾರ ನಕ್ಸಲ್ ಬೆಂಬಲಿಗರು ಎಂದು ಆರೋಪಿಸಿ ಸುಳ್ಳು ಕೇಸ್ ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಾಲೂಕು ಮಟ್ಟದಿಂದ ರಾಜ್ಯ ಮಟ್ಟದ ವರೆಗೂ ಪ್ರತಿಭಟನೆ ನಡೆಸಿತು.
ವಿಠ್ಠಲ ಮಲೆಕುಡಿಯ ಅವರ ಮನೆಯಲ್ಲಿ ಭಗತ್ ಸಿಂಗ್ ಜೀವನ ಚರಿತ್ರೆ ಪುಸ್ತಕ, ಕಾಫಿ, ಚಹಾ ಹುಡಿ, ಸಕ್ಕರೆ, ತಟ್ಟೆ, ಆಟಿಕೆ ಬೈನಾಕುಲರ್ ಸಿಕ್ಕಿರುವುದು ದೇಶದ್ರೋಹ ಹೇಗಾಗುತ್ತದೆ ಎಂದು ಅಂದು ನಾವು ಪ್ರಶ್ನಿಸಿದ್ದು, ನ್ಯಾಯಾಲಯ ಕೂಡ ಅದೇ ಅಂಶಗಳನ್ನು ಮುಂದಿಟ್ಟು ಇಬ್ಬರನ್ನೂ ಕೇಸ್ ನಲ್ಲಿ ದೋಷಮುಕ್ತಗೊಳಿಸಿದೆ. ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಈ ತೀರ್ಪುನಿಂದ ಮುಖಭಂಗವಾಗಿದೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ವಸಂತ ನಡ, ಕಾರ್ಯದರ್ಶಿ ಜಯಾನಂದ ಪಿಲಿಕಲ, ಸಂಚಾಲಕ ಶೇಖರ್ ಲಾಯಿಲ ಅಭಿಪ್ರಾಯ ಪಟ್ಟಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಒಕ್ಕಲೆಬ್ಬಿಸುವುದನ್ನು ವಿರೋಧಿಸಿದ್ದರಿಂದ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಪ್ರಶ್ನಿಸಿದ ಏಕೈಕ ಕಾರಣದಿಂದಾಗಿ ಈ ಸುಳ್ಳು ಕೇಸ್ ದಾಖಲಿಸುವ ಮೂಲಕ ರಾಜ್ಯ ಸರ್ಕಾರ ಹಗೆತನ ಸಾಧಿಸಿದೆ ಎಂದಿರುವ ಅವರು, ವಿಠ್ಠಲ ಮಲೆಕುಡಿಯ ಪ್ರಕರಣದಲ್ಲಿ ಬೆಂಬಲಕ್ಕೆ ನಿಂತು ಲೋಕಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಅಂದಿನ ಕೇರಳ ಸಂಸದ, ಪ್ರಸ್ತುತ ಕೇರಳ ಸ್ಪೀಕರ್ ಎಂ.ಬಿ.ರಾಜೇಶ್, ಅಂದಿನ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಾಟ್, ಬೃಂದಾ ಕಾರಾಟ್, ಇತ್ತೀಚಿಗೆ ನಿಧನರಾದ ಚಿಂತಕ ಜಿ.ಕೆ ಗೋವಿಂದ ರಾವ್ ಸೇರಿದಂತೆ ನಾಡಿನ ಎಡಪಂಥೀಯ ನಾಯಕರಿಗೆ, ಹೋರಾಟಗಾರಿಗೆ, ಚಿಂತಕ, ಬರಹಗಾರರಿಗೆ, ಪತ್ರಕರ್ತರಿಗೆ ವಿಠ್ಠಲ ಮಲೆಕುಡಿಯ ಅವರ ಪರ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ಅವರಿಗೆ ನಮ್ಮ ಸಂಘಟನೆಯ ಪರವಾಗಿ ಅಭಿನಂದನೆಗಳು ಎಂದು ಅವರು ತಿಳಿಸಿದ್ದಾರೆ.