ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಎಫ್‍ಐಆರ್ ದಾಖಲು
ಚೆನ್ನೈ: ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಎರಡು ಗುಂಪುಗಳ ನಡುವೆ ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಧರ್ಮಪುರಿಯ ಬೊಮ್ಮಿಡಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜನವರಿ 8 ರಂದು ಪಾಪ್ಪಿರೆಡ್ಡಿಪಟ್ಟಿ ಬಳಿಯ ಬೊಮ್ಮಿಡಿಯ ಸೇಂಟ್ ಲೂಡ್ರ್ಸ್ ಚರ್ಚ್‍ನ ಹೊರಗೆ ನಡೆದ ರ‍್ಯಾಲಿಯಲ್ಲಿ ಚರ್ಚ್‍ಗೆ ಅವರು ಪ್ರವೇಶಿಸುವುದನ್ನು ವಿರೋಧಿಸಿದ ಕ್ರಿಶ್ಚಿಯನ್ ಯುವಕರ ಗುಂಪಿನೊಂದಿಗೆ ಅಣ್ಣಾಮಲೈ ವಾಗ್ವಾದ ನಡೆಸಿದ್ದರು.
ಈ ವೇಳೆ ಚರ್ಚ್ ಪ್ರವೇಶಿಸದಂತೆ ತಡೆದ ಪ್ರತಿಭಟನಾಕಾರರು ಮತ್ತು ಬಿಜೆಪಿ ಮುಖಂಡರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಈ ಗದ್ದಲದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.




