December 15, 2025

ಆರೋಪಿ‌ ಮನೋರಂಜನ್‌ಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಮೂರು ಬಾರಿ ಪಾಸ್‌ ಸಿಕ್ಕಿತ್ತು

0
image_editor_output_image429092058-1702533171398.jpg

ನವದೆಹಲಿ: ಲೋಕಸಭೆಯ ಮೇಲೆ ದಾಳಿ ನಡೆಸಿದ್ದ ಮೈಸೂರು ಮೂಲದ ಮನೋರಂಜನ್‌ ಮೂರು ಬಾರಿ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಕಳೆದ ಅಧಿವೇಶನದ ಸಮಯದಲ್ಲಿ ಹೊಸ ಸಂಸತ್ ವೀಕ್ಷಣೆ ನೆಪದಲ್ಲಿ ಎರಡು ಬಾರಿ ಮನೋರಂಜನ್ ಪಾಸ್‌ ಪಡೆದಿದ್ದ. ಪಾಸ್ ಪಡೆದು ವೀಕ್ಷಕರ ಗ್ಯಾಲರಿಯವರೆಗೂ ಇರುವ ಭದ್ರತಾ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿದ್ದಾನೆ.

ಸುದೀರ್ಘ ಅಧ್ಯಯನ ಮಾಡಿದ ಮನೋರಂಜನ್‌ ದಾಳಿ ನಡೆಸಲು ಸ್ಕೆಚ್‌ ರೂಪಿಸಿ ಮತ್ತೆ ಪಾಸ್‌ ನೀಡುವಂತೆ ಮನವಿ ಮಾಡಿದ್ದಾನೆ. ಈ ವೇಳೆ ಪಾಸ್‌ ನೀಡಲು ಪ್ರತಾಪ್‌ ಸಿಂಹ ಕಚೇರಿ ನಿರಾಕರಿಸಿದೆ. ಪದೇ ಪದೇ ಪಾಸ್ ನೀಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಲಾಗಿತ್ತು. ಬಳಿಕ ಮೈಸೂರಿನ ಆಪ್ತ ಸಹಾಯಕರ ಮೂಲಕ ಒತ್ತಡ ಹೇರಿ ದೆಹಲಿಯಲ್ಲಿರುವ ಪ್ರತಾಪ್ ಸಿಂಹರ ಕಚೇರಿಯಿಂದ ಪಾಸ್ ಪಡೆದಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಒಂದು ಪಾಸ್‌ನಲ್ಲಿ ಇಬ್ಬರು ಸಂಸತ್ ಪ್ರವೇಶ ಮಾಡಲು ಅವಕಾಶವಿದೆ. ಪಾಸ್ ಅನ್ನು ಸಂಗ್ರಹ ವಸ್ತುವಾಗಿ ಇಟ್ಟುಕೊಳ್ಳಲು ಸಾಗರ್ ಶರ್ಮ ಇಷ್ಟ ಪಟ್ಟಿದ್ದಾನೆ. ಹೀಗಾಗಿ ಸಾಗರ್ ಹೆಸರಲ್ಲಿ ಪಾಸ್ ಕೊಡಿ ಎಂದು ಮಂಗಳವಾರ ಸಂಜೆ ಪಾಸ್‌ ಪಡೆದುಕೊಂಡಿದ್ದ. ಅದರಂತೆ ಮನೋರಂಜನ್ ಹಾಗೂ ಸಾಗರ್ ಶರ್ಮ ಸಂಸತ್ ಪ್ರವೇಶ ಮಾಡಿದ್ದರು.

ಸಂಸತ್‌ನಲ್ಲಿ ಬುಧವಾರ ನಡೆದ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿಂತೆ ಒಟ್ಟು 5 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!