December 15, 2025

ಉಳ್ಳಾಲ: ಯುವಕನ ಇರಿದು ಬರ್ಬರ ಹತ್ಯೆ

0
image_editor_output_image1184492008-1702528182455

ಉಳ್ಳಾಲ: ನಡುರಾತ್ರಿ ಶಾಲೆ ಎದುರು ಬಿಯರ್ ಕುಡಿದು ಬಾಟಲಿಯನ್ನ ರಸ್ತೆಗೆ ಎಸೆದವರನ್ನ ಪ್ರಶ್ನಿಸಿದ ಯುವಕನನ್ನ ಇರಿದು ಕೊಲೆ ಮಾಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ಬುಧವಾರ ರಾತ್ರಿ ನಡೆದಿದೆ.

ಕೊಲ್ಯ ಸಾರಸ್ವತ ಕಾಲನಿ ಜಾಯ್ ಲ್ಯಾಂಡ್ ಶಾಲಾ ಬಳಿ ನಿವಾಸಿ ವರುಣ್ ಗಟ್ಟಿ (28) ಕೊಲೆಯಾದ ಯುವಕ.

ಬುಧವಾರ ರಾತ್ರಿ 10.45ರ ವೇಳೆಗೆ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆಯ ಎದುರುಗಡೆಯ ಕಟ್ಟೆಯೊಂದರಲ್ಲಿ ಕುಳಿತು ಆರೋಪಿ ಸೂರಜ್ ಮತ್ತು ರವಿರಾಜ್ ಎಂಬವರು ಬಿಯರ್ ಕುಡಿದು ಬಾಟಲಿಯನ್ನ ರಸ್ತೆಗೆ ಎಸೆದಿದ್ದರೆನ್ನಲಾಗಿದೆ. ಈ ವೇಳೆ ತನ್ನ ಮನೆಯಲ್ಲಿದ್ದ ವರುಣ್ ಮತ್ತು ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ವೇಳೆ ಇತ್ತಂಡಗಳ ನಡುವೆ ವಾಗ್ವಾದ, ತಳ್ಳಾಟ ನಡೆದಿದ್ದು ಸೂರಜ್, ವರುಣ್ ಬೆನ್ನಿಗೆ ಹರಿತವಾದ ಆಯುಧದಿಂದ ಇರಿದಿದ್ದಾನೆ.

ಗಂಭೀರ ಗಾಯಗೊಂಡ ವರುಣ್ ಸಮೀಪದ ತನ್ನ ಮನೆ ಕಡೆ ನಡೆದು ಹೋಗಿದ್ದು, ಆತನ ಸಹೋದರ ಶರಣ್ ಮತ್ತು ಸ್ನೇಹಿತರು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ವರುಣ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಘಟನಾ ಸ್ಥಳದ ರಸ್ತೆಯುದ್ದಕ್ಕೂ ವರಣ್ ರಕ್ತ ಹರಿದಿದೆ.

ಇರಿದು ಕೊಲೆ ಮಾಡಿದ ಸೂರಜ್ ಮತ್ತು ಆತನೊಂದಿಗಿದ್ದ ರವಿರಾಜ್ ಸಾರಸ್ವತ ಕಾಲೊನಿ ನಿವಾಸಿಗಳಾಗಿದ್ದು, ಇಬ್ಬರನ್ನೂ ಕ್ಷಿಪ್ರವಾಗಿ ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರವಿರಾಜ್ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯನಾಗಿದ್ದು, ಸೂರಜ್ ಮರಳು ಸಾಗಿಸುವ ಲಾರಿ ಚಾಲಕನಾಗಿದ್ದಾನೆ.

ಮೃತ ವರುಣ್ ಮಂಗಳೂರು ಮೂಡಾದ ಕಮೀಷನರ್ ಅವರ ವಾಹನದ ಚಾಲಕನಾಗಿದ್ದರು. ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!