ಮೋದಿ ವಿರುದ್ಧ ಹೇಳಿಕೆ: ರಾಹುಲ್ ಗಾಂಧಿಗೆ ಕೇಂದ್ರ ಚುನಾವಣಾ ಆಯೋಗದಿಂದ ನೋಟಿಸ್
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದಿಂದ ರಾಹುಲ್ ಗಾಂಧಿಗೆ ನೋಟಿಸ್ ನೀಡಲಾಗಿದೆ.
ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಸಂಬಂಧ ಪಟ್ಟಂತೆ ಬಿಜೆಪಿಯು ಕೇಂದ್ರ ಚುನಾವಣಾ ಆರೋಗ ಮೊರೆಹೋಗಿತ್ತು. ದೇಶದ ಪ್ರಧಾನಿಯನ್ನು ಜೇಬುಗಳ್ಳ, ಅಪಶಕುನಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ. ಇದು ರಾಜಕೀಯ ಚರ್ಚೆಯ ಮಟ್ಟ ಹದಗೆಡುತ್ತಿರುವುದರ ಸಂಕೇತ. ಯಾವ ವ್ಯಕ್ತಿಯನ್ನು ಜೇಬುಗಳ್ಳರೆಂದು ಕರೆಯುವುದು ಕೆಟ್ಟ ನಿಂದನೆಯಾಗಿದೆ ಹಾಗೂ ವ್ಯಕ್ತಿಯ ವೈಯಕ್ತಿಕ ದಾಳಿಗೆ ಸಮವಾಗಿದೆ. ವ್ಯಕ್ತಿಯ ಪ್ರತಿಷ್ಠೆಗೆ ಹಾನಿ ಮಾಡುವಂತಹ ಹಾಗೂ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುವ ಸ್ಪಷ್ಟ ಉದ್ದೇಶದಿಂದ ಅಂತಹ ಹೇಳಿಕೆ ನೀಡಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ನೀಡಿರುವ ಹೇಳಿಕೆ ಹಿನ್ನೆಲೆ ಇದೀಗ ಅವರಿಗೆ ನೋಟಿಸ್ ನೀಡಲಾಗಿದೆ. ಮೋದಿ ಅವರ ವಿರುದ್ಧ ರಾಹುಲ್ ಗಾಂಢಿ ನೀಡಿರುವ ಹೇಳಿಕೆಗೆ ನವೆಂಬರ್ 25ರೊಳಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.
ರಾಜಸ್ಥಾನದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಮೋದಿ ಪನೋತಿ ಮತ್ತು ಜೇಬುಗಳ್ಳ. ನಮ್ಮ ಹುಡುಗರು ಬಹುತೇಕ ವಿಶ್ವಕಪ್ ಗೆಲ್ಲುತ್ತಿದ್ದರು. ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿಯೇ ಕ್ರೀಡಾಂಗಣಕ್ಕೆ ಇಳಿದಿದ್ದರು. ಆದರೆ ಕೆಟ್ಟ ಶಕುನವೊಂದು ಮೈದಾನ ಪ್ರವೇಶಿಸಿದ್ದರಿಂದ ವಿಶ್ವಕಪ್ ಪಂದ್ಯ ಸೋಲುವಂತೆ ಮಾಡಿದೆ ಎಂದಿದ್ದರು. ಇಷ್ಟೇ ಅಲ್ಲದೆ ರಾಹುಲ್ ಗಾಂಧಿಯವರು ಜನರಿಂದಲೂ ಸಹ ಮೋದಿ ಅವರನ್ನು ಅಪಶಕುನ ಎಂದು ಹೇಳಿಸಿದ್ದರು.