ಬಂಟ್ವಾಳ: ಅಕ್ರಮ ಮರಮಟ್ಟು ಸಾಗಾಟ: ಪಿಕಪ್ ವಾಹನ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ
ಬಂಟ್ವಾಳ: ಅಕ್ರಮವಾಗಿ ಮರಮಟ್ಟುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದ ಬಂಟ್ವಾಳ ಅರಣ್ಯ ಇಲಾಖೆಯವರು ಆರೋಪಿಗಳ ಸಮೇತ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ವಾಹನ ಮತ್ತು ಅಮಾನತು ಪಡಿಸಿದ ಸೊತ್ತಿನ ಸಮೇತ ಮೌಲ್ಯ ಒಟ್ಟು 6 ಲಕ್ಷ ರೂಪಾಯಿ. ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ಮಾರ್ನ ಬೈಲು ಹಾಗೂ ಉಳ್ಳಾಲ ತಾಲೂಕು ಸಜಿಪ ಪಡು ಗ್ರಾಮದ ಕೋಟೆಕನಿ ಎಂಬಲ್ಲಿ ಅಕ್ರಮವಾಗಿ ವಿವಿಧ ಜಾತಿಯ ದಿಮ್ಮಿಗಳನ್ನು ಸಾಗಿಸುತ್ತಿದ್ದ ಎರಡು ಪಿಕಪ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇಬ್ಬರು ಆರೋಪಿತರ ಮೇಲೆ ತಕ್ಷೀರು ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಪಿ., ಉಪವಲಯ ಅರಣ್ಯ ಅಧಿಕಾರಿ ಯಶೋಧರ, ಗಸ್ತು ಅರಣ್ಯ ಪಾಲಕರಾದ ಜಿತೇಶ್ ಪಿ, ಶೋಬಿತ್ ಶ್ರೀಮತಿ ಸ್ಮಿತಾ ಮತ್ತು ರೇಖಾ ಸಚಿನ್, ಅರಣ್ಯ ವೀಕ್ಷಕರಾದ ಭಾಸ್ಕರ ಹಾಗೂ ಇಲಾಖಾ ವಾಹನ ಚಾಲಕ ಜಯರಾಮ್ ಇವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.
ಪ್ರಕರಣದ ಮುಂದಿನ ತನಿಖೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಎಸ್ ಮರಿಯಪ್ಪ ಅವರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಪಿ ಇವರು ನಡೆಸಲಿದ್ದಾರೆ.