ಶಾಲೆಯಲ್ಲಿ ಓದುತ್ತಿರುವ 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲನ ಬಂಧನ
ಚಂಡೀಗಢ: ಶಾಲೆಯಲ್ಲಿ ಓದುತ್ತಿರುವ ಸುಮಾರು 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಶಾಲೆಯ ಪ್ರಾಂಶುಪಾಲರನ್ನು ಬಂಧಿಸಿದ ಘಟನೆ ಹರಿಯಾಣ ಜಿಲ್ಲೆಯ ಜಿಂದ್ ನಲ್ಲಿ ನಡೆದಿದೆ.
ಹರಿಯಾಣದ ಜಿಂದ್‌ನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಕನಿಷ್ಠ 142 ಅಪ್ರಾಪ್ತ ಬಾಲಕಿಯರು ಆರು ವರ್ಷಗಳ ಅವಧಿಯಲ್ಲಿ ಶಾಲೆಯ ಪ್ರಾಂಶುಪಾಲರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು, ಈ ವಿಚಾರವಾಗಿ ಲೈಂಗಿಕ ಕಿರುಕುಳ ಸಮಿತಿ ನಡೆಸಿದ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದೆ.
ಪ್ರಾಂಶುಪಾಲರು ತಮ್ಮ ಕಚೇರಿಗೆ ಕರೆದು ಲೈಂಗಿಕ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ತಿಳಿಸಿದ್ದಾರೆ. ಮಹಿಳಾ ಆಯೋಗ ನೀಡಿದ ದೂರಿನ ಬಳಿಕ ನವೆಂಬರ್ 6 ರಂದು ಪ್ರಾಂಶುಪಾಲರನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾಗಿ ಹೇಳಿದ್ದಾರೆ.
ಬಾಲಕಿಯರ ಲೈಂಗಿಕ ಕಿರುಕುಳದ ದೂರನ್ನು ಮುಂದಿನ ಕ್ರಮಕ್ಕಾಗಿ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. 390 ಹುಡುಗಿಯರಲ್ಲಿ 142 ಮಂದಿ ವಿದ್ಯಾರ್ಥಿನಿಯರು ಪ್ರಿನ್ಸಿಪಾಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಆರೋಪದ ಮೇಲೆ ಸದ್ಯ ಪ್ರಾಂಶುಪಾಲರು ಬಂಧನದಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.