ಮಂಗಳೂರು: ಪಾರ್ಟ್ ಟೈಮ್ ಕೆಲಸವನ್ನು ನಂಬಿ 15,04,838 ರೂ.ವನ್ನು ಕಳೆದುಕೊಂಡ ವ್ಯಕ್ತಿ
ಮಂಗಳೂರು: ಪಾರ್ಟ್ ಟೈಮ್ ಕೆಲಸದ ಬಗ್ಗೆ ಟೆಲಿಗ್ರಾಂ ಖಾತೆಗೆ ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 15,04,838 ರೂ.ವನ್ನು ಕಳೆದುಕೊಂಡು ವಂಚನೆಗೊಳಗಾಗಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನ್‌ಲೈನ್ ಮೂಲಕ ಇಲೆಕ್ಟ್ರಾನಿಕ್ಸ್, ಗೃಹೋಪಯೋಗಿ ಮತ್ತಿತರ ವಸ್ತುಗಳಿಗೆ ರೇಟಿಂಗ್ ನೀಡಿ, ಕಮಿಷನ್ ಹಣವನ್ನು ಪಡೆಯಬಹುದು ಎಂದು ನ.14ರಂದು ರಂಜಿತ್ ಯಾದವ್ ಎಂಬ ಹೆಸರಿನಿಂದ ತನಗೆ ಟೆಲಿಗ್ರಾಂ ಸಂದೇಶ ಬಂದಿತ್ತು.
ಅದನ್ನು ನಂಬಿದ ನಾನು ಸಂಬಂಧಪಟ್ಟ ವೆಬ್‌ಸೈಟ್‌ನಲ್ಲಿ ಖಾತೆ ತೆರೆದು ಟ್ರಯಲ್ ಜಾಬ್ ಮೂಲಕ 860 ರೂ. ಕಮಿಷನ್ ಪಡೆದಿದ್ದೆ. ಕೆಲಸ ಮುಂದುವರಿಸಲು 10 ಸಾವಿರ ರೂ. ಪಾವತಿಸುವಂತೆ ಸಂದೇಶ ಬಂದಿದ್ದು, ಅದನ್ನು ಕೂಡ ವರ್ಗಾವಣೆ ಮಾಡಿದ್ದೆ.
ಬಳಿಕ ತನಗೆ ಕಮಿಷನ್ ರೂಪದಲ್ಲಿ 14,900 ರೂ. ಮರುಪಾವತಿಯಾಗಿತ್ತು. ಇನ್ನಷ್ಟು ಹೆಚ್ಚಿನ ಹಣ ದೊರಕಬಹುದು ಎಂದು ನಂಬಿದ ತಾನು ತನ್ನ ಬ್ಯಾಂಕ್ ಖಾತೆಯಿಂದ 11,30,510 ರೂ. ಹಾಗೂ ತನ್ನ ತಂದೆಯ ಖಾತೆಯಿಂದ 3,74,328 ರೂ.ವರ್ಗಾವಣೆ ಮಾಡಿದ್ದೆ.
ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಇನ್ನಷ್ಟು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೋಸ ಹೋದ ವ್ಯಕ್ತಿಯು ಸೆನ್ ಠಾಣೆಗೆ ದೂರು ನೀಡಿದ್ದಾರೆ.