ಉಡುಪಿ: ಸ್ಕೂಟಿಗೆ ಅಪರಿಚಿತ ಕಾರು ಢಿಕ್ಕಿ: ಬಿಜೆಪಿ ಮುಖಂಡ ಮೃತ್ಯು
ಉಡುಪಿ :ಸ್ಕೂಟಿಗೆ ಅಪರಿಚಿತ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ವಿಜಯಾ ಬ್ಯಾಂಕಿನ ನಿವೃತ್ತ ಸಿಬಂದಿ, ಬಿಜೆಪಿ ಮುಖಂಡ 68 ವರ್ಷ ಪ್ರಾಯದ ಗೋಪ ಪೂಜಾರಿ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ- ಮಂಗಳೂರು ರಸ್ತೆಯ ಕಟಪಾಡಿ ಮೂಡುಬೆಟ್ಟು ಬಳಿ ನಡೆದಿದೆ.
ಮೃತರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಗೋಪ ಪೂಜಾರಿ ಅವರು ಅಕ್ಟೋಬರ್ 26ರಂದು ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ- ಮಂಗಳೂರು ರಸ್ತೆಯಲ್ಲಿ ಸ್ಕೂಟಿ ಚಲಾಯಿಸಿಕೊಂಡು ಕಾಪು ಕಡೆಗೆ ಸಂಚರಿಸುತ್ತಿದ್ದಾಗ ಕಟಪಾಡಿ ಮೂಡುಬೆಟ್ಟು ಬಳಿ ಅವರ ಸ್ಕೂಟಿಗೆ ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು.
ಈ ಸಂದರ್ಭದಲ್ಲಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಒದಗಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು.
ಐಸಿಯು ವಿಭಾಗದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಅವರು ನವೆಂಬರ್ 13ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಅಪಘಾತಕ್ಕೆ ಕಾರಣವಾಗಿದ್ದ ಕಾರನ್ನು ಪೊಲೀಸರು ಬ್ರಹ್ಮಾವರದಲ್ಲಿ ಪತ್ತೆ ಹಚ್ಚಿ ಕಾರು ಮತ್ತು ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





