ಉಡುಪಿ: ಮಲ್ಪೆಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: 2 ಮಸೀದಿಗಳಲ್ಲಿ ನಾಲ್ವರ ಅಂತ್ಯಸಂಸ್ಕಾರ
ಉಡುಪಿ: ಉಡುಪಿ ಮಲ್ಪೆಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಉಡುಪಿ ನಗರದ ಎರಡು ಮಸೀದಿಗಳಲ್ಲಿ ನಾಲ್ಕು ಶವಗಳ ಪ್ರತ್ಯೇಕ ವಿಧಿ ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.
ಸೌದಿ ಅರೇಬಿಯಾದಲ್ಲಿದ್ದ ಮೃತ ಹಸೀನಾ ಪತಿ ನೂರ್ ಮೊಹಮ್ಮದ್ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದು, ಉಡುಪಿಯ ಜಾಮೀಯ ಮಸೀದಿಗೆ ಆಗಮಿಸಿದರು.
ಅಲ್ಲದೆ ಈ ಸಂದರ್ಭ ಹಲವು ಮಂದಿ ಪೊಲೀಸರು, ಕೆಲವು ಸಂಬಂಧಿಕರು ಉಪಸ್ಥಿತರಿದ್ದರು. ಇನ್ನು ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಐದು ತಂಡಗಳನ್ನು ಉಡುಪಿ ಎಸ್ಪಿ ಡಾ.ಅರುಣ್ ರಚನೆ ಮಾಡಿದ್ದಾರೆ. ಅಲ್ಲದೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ.
ಕೌಟುಂಬಿಕ ಕಾರಣ, ಪೂರ್ವದ್ವೇಷ ಅಥವಾ ವ್ಯವಹಾರ ಮತ್ತಿತರ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು.
ಕೊಲೆಯಾದ ಕುಟುಂಬದ ಸದಸ್ಯರು ಕೆಲಸ ಮಾಡುತ್ತಿರುವ ಕಡೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.
ಪೊಲೀಸರು ಸಂತೆಕಟ್ಟೆ, ಕರಾವಳಿ ಜಂಕ್ಷನ್ ಗಳ ಸಿಸಿಟಿವಿ ಫೂಟೇಜ್ ಕಲೆ ಹಾಕುತ್ತಿದ್ದಾರೆ. ಆರೋಪಿಯನ್ನು ಮನೆಗೆ ಬಿಟ್ಟು ಬಂದ ಆಟೋ ಚಾಲಕನಿಂದಲೂ ಮಾಹಿತಿ ಸಂಗ್ರಹ ಮಾಡಲಾಗಿದೆ. ಶೀಘ್ರ ಆರೋಪಿಯನ್ನು ಪತ್ತೆ ಹಚ್ಚುವ ವಿಶ್ವಾಸ ಉಡುಪಿ ಎಸ್ಪಿ ವ್ಯಕ್ತಪಡಿಸಿದರು.





