ಜಿಲ್ಲಾಧಿಕಾರಿ ತಂಡ ತಾಲೂಕುಗಳಿಗೆ ಭೇಟಿ: ಡಿಸಿ ಮುಲ್ಲೈ ಮುಗಿಲನ್
ಮಂಗಳೂರು: ಕಂದಾಯ ಸೇರಿದಂತೆ ಅಗತ್ಯ ಜನರ ಸಮಸ್ಯೆ ನಿವಾರಣೆಗೆ ಗ್ರಾಮಾಂತರ ಪ್ರದೇಶಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಜನರ ಅಲೆದಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ತಂಡ ವಾರಕ್ಕೊಮ್ಮೆ ಒಂದೊಂದು ತಾಲೂಕು ತಾಲೂಕುಗಳಿಗೆ ಭೇಟಿ ನೀಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರಿಂದ ಜಿಲ್ಲೆ ಹಾಗೂ ನಗರ ವ್ಯಾಪ್ತಿಯ ಹಲವು ಸಮಸ್ಯೆಗಳನ್ನು ಅರಿತುಕೊಂಡ ಬಳಿಕ ಅವರು ಈ ವಿಷಯ ತಿಳಿಸಿದರು.
ಮುಂದಿನ ವಾರದಿಂದ ಈ ಭೇಟಿ ಕಾರ್ಯಕ್ರಮ ನಡೆಯಲಿದ್ದು, ವಾರದಲ್ಲಿ ಒಂದು ದಿನವನ್ನು ಅದಕ್ಕಾಗಿ ನಿಗದಿಪಡಿಸಲಾಗುವುದು. ಆ ದಿನ ಆರಂಭದಲ್ಲಿ ಜಿಲ್ಲಾಡಳಿತದ ತಂಡ ನಿಗದಿತ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಇತ್ಯರ್ಥಪಡಿಸಲಿದೆ.
ತಾನು ಕೂಡಾ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಲಿದ್ದೇನೆ. ಜನರನ್ನು ತಾಲೂಕು ಮಟ್ಟದಲ್ಲಿಯೇ ಭೇಟಿಯಾಗಿ ಸಮಸ್ಯೆ ಇತ್ಯರ್ಥ ಪಡಿಸುವುದು ಇದರ ಉದ್ದೇಶವಾಗಿದ್ದು, ಬಳಿಕ ಹೋಬಳಿ ಮಟ್ಟದಲ್ಲಿಯೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.”





