ಪುತ್ತೂರು | ಭಾರೀ ಮಳೆಗೆ ಅರಿಯಡ್ಕ ಶಾಲೆಯ ಕಟ್ಟಡದ ಗೋಡೆ ಬಿರುಕು: ವಿದ್ಯಾರ್ಥಿಗಳ ಸ್ಥಳಾಂತರ
ಪುತ್ತೂರು: ಭಾರೀ ಮಳೆಗೆ ಅರಿಯಡ್ಕ ಸ.ಹಿ.ಪ್ರಾ. ಶಾಲಾ ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದು ಕುಸಿಯುವ ಭೀತಿಯಲ್ಲಿರುವುದರಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ.
ಶತಮಾನಗಳ ಇತಿಹಾಸ ಹೊಂದಿರುವ ಅರಿಯಡ್ಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿ ತನಕದ ವಿದ್ಯಾರ್ಥಿಗಳಿದ್ದು ಒಂದೇ ಕಟ್ಟಡದಲ್ಲಿ 3-7ನೇ ತರಗತಿ ತನಕ ಕ್ಲಾಸ್‌ಗಳು ನಡೆಯುತ್ತಿದ್ದು, ಅದೇ ಕಟ್ಟಡದ ಗೋಡೆ ಬಿರುಕುಬಿಟ್ಟಿದೆ. ಗೋಡೆ ಬಿರುಕು ಬಿಟ್ಟಿರುವ ಕಾರಣ ಕಟ್ಟಡದ ಮೇಲ್ಛಾವಣಿ, ಪಕ್ಕಾಸುಗಳು ಕುಸಿತಗೊಂಡಿದ್ದು, ಮುರಿದು ಬೀಳುವ ಹಂತದಲ್ಲಿದೆ.
ಜು. 23ರ ಭಾನುವಾರ ಈ ಘಟನೆ ನಡೆದಿದ್ದು, ಇಂದು ತರಗತಿಗೆ ವಿದ್ಯಾರ್ಥಿಗಳು ಬಂದಾಗ ವಿಷಯ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದರೂ ಅವರಿಗೆ ಅಲ್ಲಿ ಬದಲಿ ವ್ಯವಸ್ಥೆಗೆ ಯಾವುದೇ ತರಗತಿ ಕೋಣೆಗಳು ಇಲ್ಲ. ರಂಗಮಂಟಪದಲ್ಲಿ ವಿದ್ಯಾರ್ಥಿಗಳನ್ನು ಇರಿಸಿ ಪಾಠ ಮಾಡಲಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.




