ಜಲಾಶಯದ ನೀರಿನಲ್ಲಿ ಬಿದ್ದ ಮೊಬೈಲ್ ಗಾಗಿ ಅಣೆಕಟ್ಟಿನ ನೀರನ್ನೇ ಖಾಲಿ ಮಾಡಿಸಿದ ಅಧಿಕಾರಿ
ಛತ್ತೀಸ್‌ಗಢ: ಜಲಾಶಯದ ನೀರಿನಲ್ಲಿ ಬಿದ್ದ ಮೊಬೈಲ್ಗಾಗಿ ಅಧಿಕಾರಿಯೊಬ್ಬ ಇಡೀ ಅಣೆಕಟ್ಟಿನ ನೀರನ್ನೇ ಖಾಲಿ ಮಾಡಿಸಿದ್ದಾನೆ.
ಕೃಷಿ ಮತ್ತು ಕುಡಿಯುವ ನೀರಿಗೆ ಆಪತ್ತು ತಂದ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್ ನೀರು ಪೋಲು ಮಾಡಿ ಅಮಾನತಾದ ಅಧಿಕಾರಿ.
ಭಾನುವಾರ ರಜಾ ದಿನವಾದ ಕಾರಣ ರಾಜೇಶ್ ತನ್ನ ಸ್ನೇಹಿತರೊಂದಿಗೆ ಇಲ್ಲಿನ ಕೇರ್ಕಟ್ಟಾ ಅಣೆಕಟ್ಟೆಗೆ ಭೇಟಿ ನೀಡಿದ್ದರು. ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಅಚಾನಕ್ಕಾಗಿ ತಮ್ಮ ಬಳಿಯಿದ್ದ 1 ಲಕ್ಷ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಗ್ಯಾಲಾಕ್ಸಿ ಮೊಬೈಲ್ ಜಲಾಶಯದ ಒಡ್ಡಿನ ನೀರಿನೊಳಗೆ ಬಿದ್ದಿದೆ.
ಜಲಾಶಯದ ನೀರಿಗೆ ಬಿದ್ದ ಮೊಬೈಲ್ಗಾಗಿ ಸ್ಥಳೀಯರು ಹುಡುಕಾಡಿದ್ದಾರೆ. ಪ್ರಯತ್ನದ ಹೊರತಾಗಿಯೂ ಮೊಬೈಲ್ ಸಿಕ್ಕಿರಲಿಲ್ಲ. ಇದರಿಂದ ಅಧಿಕಾರಿ ರಾಜೇಶ್, ಡೀಸೆಲ್ ಎಂಜಿನ್ಗಳನ್ನು ತರಿಸಿ ನೀರನ್ನು ಹೊರಹಾಕಿಸಿದ್ದಾನೆ.
ಇದರಿಂದ ಜಲಾಶಯದಲ್ಲಿದ್ದ 41 ಲಕ್ಷ ಲೀಟರ್ ನೀರು ಪೋಲಾಗಿದೆ. ಇಷ್ಟು ಪ್ರಮಾಣದ ನೀರು ಕೃಷಿಗೆ ಬಳಕೆ ಮಾಡಿದ್ದರೆ, 1500 ಎಕರೆಗೆ ಸಾಕಾಗುತ್ತಿತ್ತು ಎಂದು ಅಂದಾಜಿಸಲಾಗಿದೆ.
ಬೇಜವಾಬ್ದಾರಿ ಅಧಿಕಾರಿ ಅಮಾನತು: 1 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ಗಾಗಿ ಕೃಷಿ ಬಳಕೆಗೆ ಬೇಕಾಗಿದ್ದ ಜಲಾಶಯದ ನೀರನ್ನು ಪಂಪ್ಸೆಟ್ನಿಂದ ಹೊರಹಾಕಿಸಿದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಇಷ್ಟು ಪ್ರಮಾಣದ ನೀರನ್ನು ಹೊರಹಾಕಿದ ಬಳಿಕ ಮೊಬೈಲ್ ಸಿಕ್ಕರೂ ಅದು ಕೆಟ್ಟು ಹೋಗಿದೆ. ನೀರು ಮೊಬೈಲ್ ಒಳಹೋಗಿದ್ದರಿಂದ ಅದು ಹಾಳಾಗಿದೆ.




