August 17, 2026

ರೈಲು ನಿಲ್ದಾಣಗಳ ಕುಡಿಯುವ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ

0
IMG-20260817-WA0031

ನವದೆಹಲಿ: ದೇಶದ ಹಲವು ರೈಲ್ವೆ ನಿಲ್ದಾಣಗಳ ವಾಟರ್‌ ಕೂಲರ್‌ಗಳಿಂದ ಸಂಗ್ರಹಿಸಲಾದ ಕುಡಿಯುವ ನೀರಿನ ಮಾದರಿಗಳಲ್ಲಿ ‘ಇ. ಕೊಲಿ’ ಎಂಬ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂಬ ಆಘಾತಕಾರಿ ಮಾಹಿತಿ ಮಹಾಲೇಖಪಾಲ (ಸಿಎಜಿ) ವರದಿಯಿಂದ ಬಹಿರಂಗವಾಗಿದೆ.

ಭಾರತೀಯ ರೈಲ್ವೆಯ ಎಲ್ಲಾ ವಲಯಗಳಲ್ಲಿನ 512 ರೈಲು ನಿಲ್ದಾಣಗಳಲ್ಲಿನ ಪ್ರಯಾಣಿಕರ ಸೇವೆಗಳನ್ನು ಪರಿಶೀಲಿಸಿ ಈ ವರದಿ ನೀಡಲಾಗಿದೆ.

ಪ್ರಮುಖವಾಗಿ ನಾಲ್ಕು ವಲಯಗಳಾದ್ಯಂತ 8 ರೈಲು ನಿಲ್ದಾಣಗಳಲ್ಲಿ ಕೂಲರ್‌ಗಳಿಂದ ಬಂದ ನೀರಿನ ಮಾದರಿಗಳಲ್ಲಿ ಆರೋಗ್ಯಕ್ಕೆ ಕಂಟಕವಾಗಬಲ್ಲ ಇ. ಕೋಲಿ ಇರುವುದು ಕಂಡುಬಂದಿದೆ ಎಂದು ಅಧ್ಯಯನ ಹೇಳಿದೆ. ‘ಇ. ಕೊಲಿ’ ಬ್ಯಾಕ್ಟೀರಿಯಾದ ಕೆಲವು ತಳಿಗಳು ಅತಿಸಾರ ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖವಾಗಿ ದಕ್ಷಿಣ ರೈಲ್ವೆ ವಲಯದ ಎರಡು ನಿಲ್ದಾಣಗಳು (ಕೊಯಮತ್ತೂರು ಮತ್ತು ಪಾಲಕ್ಕಾಡ್ ಜಂಕ್ಷನ್), ದಕ್ಷಿಣ ಮಧ್ಯ ರೈಲ್ವೆ ವಲಯದ ಒಂದು ನಿಲ್ದಾಣ (ಹೈದರಾಬಾದ್), ಮಧ್ಯ ರೈಲ್ವೆ ವಲಯದ ನಾಲ್ಕು ನಿಲ್ದಾಣಗಳು (ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಭಿವಂಡಿ ರೋಡ್, ಕಲ್ಯಾಣ್ ಮತ್ತು ಲೋನಾವಾಲಾ) ಹಾಗೂ ಪೂರ್ವ ರೈಲ್ವೆ ವಲಯದ ಒಂದು ನಿಲ್ದಾಣದಲ್ಲಿ (ಮಧುಪುರ್) ವಾಟರ್ ಕೂಲರ್‌ನ ನೀರಿನ ಮಾದರಿಗಳಲ್ಲಿ ‘ಇ. ಕೊಲಿ’ ಬ್ಯಾಕ್ಟೀರಿಯಾ ಇರುವುದು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.

ಆಡಿಟ್ ವರದಿಯ ಪ್ರಕಾರ, ಆಯ್ಕೆ ಮಾಡಲಾದ 512 ನಿಲ್ದಾಣಗಳ ಪೈಕಿ 458 ನಿಲ್ದಾಣಗಳಲ್ಲಿ ಅಂದರೆ ಶೇ.89ಕ್ಕಿಂತ ಹೆಚ್ಚು ನಿಲ್ದಾಣಗಳಲ್ಲಿ ಕನಿಷ್ಠ ಅತ್ಯವಶ್ಯಕ ಸೌಲಭ್ಯಗಳ (ಎಂಇಎ) ಕೊರತೆ ಇರುವುದು ಕಂಡುಬಂದಿದೆ. ಈ ನಿಲ್ದಾಣಗಳಲ್ಲಿ ಎಂಇಎ ಸೌಲಭ್ಯಗಳನ್ನು ಒದಗಿಸಿಲ್ಲ ಅಥವಾ ನಿಗದಿತ ಮಾನದಂಡಗಳಿಗಿಂತ ಕಡಿಮೆ ಮಟ್ಟದಲ್ಲಿ ಲಭ್ಯವಿವೆ ಎಂದು ವರದಿ ಹೇಳಿದೆ. ಕೆಲ ರೈಲ್ವೆ ನಿಲ್ದಾಣಗಳ ಶೌಚಾಲಯಗಳಲ್ಲಿಯೂ ಸ್ವಚ್ಛತೆಯ ಕೊರತೆ ಕಂಡುಬಂದಿದೆ ಎಂದು ಲೆಕ್ಕಪರಿಶೋಧಕರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!